ನಿಮಗಿದು ಅಚ್ಚರಿ ಎನಿಸಬಹುದು ಅಥವಾ ನಂಬಲು ಕಷ್ಟವಾಗಬಹುದು. ಆದರೆ ರಾಜಕಾರಣ ಹೇಗೆ ನಡೆಯುತ್ತೆ? ಎಂದೋ ಸತ್ತೋಗಿದ್ದ ಸಂಗತಿ ಮತ್ತ್ಯಾವತ್ತೋ ಧುತ್ತೆಂದು ಮೇಲೆದ್ದು ಯಾವ ರೀತಿ ಮರ್ಮಾಘಾತಮಾಡುತ್ತೆ? ಹೊರ ಜಗತ್ತಿಗೆ ಗೊತ್ತೇ ಆಗದೆ ಏನೆಲ್ಲಾ ನಡೆಯುತ್ತಿರುತ್ತವೆ? ರಾಜಕಾರಣಿಗಳು ಏನೊಂದನ್ನೂ ಹೇಳದೆ ಯಾವೆಲ್ಲಾ ದಾಳಗಳನ್ನು ಉರುಳಿಸುತ್ತಿರುತ್ತಾರೆ ಎನ್ನುವುದನ್ನು ಅರಿಯಲು ಇದು ಒಳ್ಳೆಯ ಉದಾಹರಣೆ.
ಬಿಜೆಪಿಯನ್ನು ಒಳಗಿಂದೊಳಗೆ ಬಾಧಿಸುತ್ತಿದ್ದ ರೆಡ್ಡಿ-ರಾಮುಲು ನಡುವಿನ ಬೇಗುದಿ ಬಹಿರಂಗಗೊಂಡಿದೆ. ಜೊತೆಗೆ ಇತರೆ ಬಣ ಬಡಿದಾಟವೂ ಸೇರಿಕೊಂಡು ರಾಜ್ಯ ಬಿಜೆಪಿಯನ್ನು ಅಕ್ಷರಶಹಃ ಹೈರಾಣ ಮಾಡಿದೆ. ನಮ್ಮದು ಬಲಿಷ್ಠ ಹೈಕಮಾಂಡ್ ಎಂದು ಬೀಗುತ್ತಿದ್ದ ಮಂದಿಗೂ ಯಾರಿಗೆ ಪಟ್ಟ ಕಟ್ಟಬೇಕು? ಉಳಿದವರನ್ನು ಹೇಗೆ ಸಮಾಧಾನಪಡಿಸಬೇಕು? ಯಾರನ್ನು ಹೇಗೆ ನಿಯಂತ್ರಿಸಬೇಕು? ಎನ್ನುವುದು ತಿಳಿಯದೆ ತಿಣುಕಾಡುತ್ತಿದ್ದಾರೆ. ಆದರೆ ರೆಡ್ಡಿ-ರಾಮುಲು ನಡುವಿನ ರಾದ್ಧಾಂತ ಬಿಜೆಪಿಗೂ ಮೀರಿ ಬಿಸಿ ಮುಟ್ಟಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ. ಅದರಲ್ಲೂ ಆ ಪಕ್ಷದ ಮಹಾನಾಯಕನಿಗೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುತ್ತಿದ್ದಾನೆ ಈ ಲೇಖಕ ಎಂದು ಸ್ಕಿಪ್ ಮಾಡಬೇಡಿ. ಹೇಗೆ ಎನ್ನುವುದನ್ನು ಬಿಡಿಸಿ ಹೇಳುವೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದ ರಾಮುಲು ಚುನಾವಣಾ ಖರ್ಚಿಗೆ ಕಾಂಗ್ರೆಸಿನ ‘ಮಹಾನಾಯಕ’ ಹಣ ಕುಳುಹಿಸಿದ್ದರಂತೆ. ಅದೂ ಪೊಲೀಸ್ ಓರ್ವ ಅಧಿಕಾರಿಯ ಮುಖಾಂತರ. ಬೆಂಗಳೂರಿನಿಂದ ಹಣ ಕೊಂಡೊಯುತ್ತಿದ್ದ ಜೀಪ್ ಅಪಘಾತ ಆಗಿದ್ದರಿಂದ ರಾಮುಲುಗೆ ಹಣ ತಲುಪಲಿಲ್ಲ ಎನ್ನುವುದು ಬೇರೆ ಮಾತು. ಆದರೆ ಅಂದಿನಿಂದಲೂ ರಾಮುಲು ಸಂಪರ್ಕದಲ್ಲಿದ್ದ ಮಹಾನಾಯಕ ಈಗ ಕಾಂಗ್ರೆಸಿಗೆ ಬಂದುಬಿಡು ಅಂತಾ ದುಂಬಾಲು ಬಿದ್ದಿದ್ದಾರೆ. ವಾಸ್ತವದಲ್ಲಿ ರಾಮುಲು ಕಾಂಗ್ರೆಸ್ ಸೇರುವುದು ಅಷ್ಟು ಸುಲಭವಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಕಾಂಗ್ರೆಸಿಗೆ ಮರ್ಯಾದೆ ಇದ್ದರೆ ರಾಮುಲುವನ್ನು ಸೇರಿಸಿಕೊಳ್ಳಬಾರದು!
ಇಷ್ಟೆಯಲ್ಲ, ಸಿದ್ದರಾಮಯ್ಯ ಕಾಂಗ್ರೆಸಿಗೆ ಬಂದ ಹೊಸದರಲ್ಲಿ ನಡೆದಿದ್ದ ಚಾಮುಂಡೇಶ್ವರಿ ಉಪಚುನಾವಣೆಗೂ ಮಹಾನಾಯಕ ಹಣ ಕಳುಹಿಸಿದ್ದರಂತೆ. ಹಣ ಕಳುಹಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರಿಗಲ್ಲ. ಬದಲಿಗೆ ಸಿದ್ದರಾಮಯ್ಯ ಅವರನ್ನು ಸೋಲಿಸಲೆಂದು ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿಗೆ. ದೇವೇಗೌಡರ ಶಕ್ತಿ ಕಡಿಮೆ ಮಾಡಬೇಕು ಎನ್ನುವ ಏಕೈಕ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸಿಗೆ ಬರುವುದನ್ನು ‘ಪಿಕ್ ಅಂಡ್ ಪಾರ್ಕ್(ಕರೆದುಕೊಂಡು ಬಂದು ಮೂಲೆಯಲ್ಲಿ ಕೂರಿಸಿ)’ ಎಂದು ಸ್ವಾಗತಿಸಿದ್ದ ಇದೇ ಮಹಾನಾಯಕನ ರಾಜಕೀಯ ಗುರು ಕೂಡ ಆಗ ಜೆಡಿಎಸ್ ಅಭ್ಯರ್ಥಿಗೆ ಸಂಪನ್ಮೂಲ ಒದಗಿಸಿದ್ದರಂತೆ.
ಇವಿಷ್ಟು ಇತಿಹಾಸವಾದರೆ ಮುಡಾ ವಿವಾದದ ಹಿಂದೆಯೂ ಮಹಾನಾಯಕನ ಮಹಿಮೆ ಇರುವುದು ಇತ್ತೀಚೆಗಿನ ವರ್ತಮಾನ. ಮೂಡಾ ಅಧ್ಯಕ್ಷನಾಗಿದ್ದ ಕೆ. ಮರಿಗೌಡನ ಕಡು ವಿರೋಧಿ ಮೈಸೂರಿನ ಶಾಸಕರೊಬ್ಬರ ಮೂಲಕ ಮಾಹಿತಿ ಮತ್ತು ದಾಖಲೆ ಸಂಗ್ರಹಿಸಿ ಸ್ನೇಹಮಹಿ ಕೃಷ್ಣ ಕೈಗಿಟ್ಟಿದ್ದೇ ಈ ಮಹಾನಾಯಕ ಎನ್ನುವುದು ಮೈಸೂರಿನಲ್ಲಿ ಕೆಲವರಿಗೆ ಗೊತ್ತಿರಬಹುದು. ವಕೀಲರ ನಿಯೋಜನೆಯಿಂದ ಹಿಡಿದು ಸಂಭಾವನೆ ಮತ್ತಿತರ ಖರ್ಚುಗಳೆಲ್ಲವನ್ನು ನಿಭಾಯಿಸುತ್ತಿರುವುದು ಮಹಾನಾಯಕ ಎಂಬ ದಟ್ಟ ಗುಮಾನಿಯೂ ಇದೆ.
ಇದು ಸಾಲದೆಂಬಂತೆ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ತೊಡೆತಟ್ಟಿದ್ದ ರಾಮುಲು ಅವರನ್ನು ಕಾಂಗ್ರೆಸಿಗೆ ತರಬೇಕೆಂಬ ‘ದೂರಾಲೋಚನೆ’ ಚಾಲ್ತಿಯಲ್ಲಿದೆ. ಅದೂ ಸಿದ್ದರಾಮಯ್ಯ ಹೆಗಲಿಗೆ ಹೆಗಲು ಕೊಡುವ ಪರಮಾಪ್ತ ಸತೀಶ್ ಜಾರಕಿಹೊಳಿ ಅವರ ಪ್ರಭಾವ ಕಮ್ಮಿ ಮಾಡಲು. ಮಹಾನಾಯಕರು ಮೇಲಿಂದ ಮೇಲೆ ಮುಟ್ಟಿನೋಡಿಕೊಳ್ಳುವಂತಹ ಪೆಟ್ಟು ನೀಡುತ್ತಿದ್ದರೆ ಸಿದ್ದರಾಮಯ್ಯ ಸುಮ್ಮನಿರುವುದು ಹೇಗೆ ಸಾಧ್ಯ? ಅವರು ಒಂದೇ ಒಂದು ಶಬ್ದ ಮಾತನಾಡದೆ ಅವರ ಆಟ ಆಡುತ್ತಿದ್ದಾರೆ. ಈ ಆಟದಲ್ಲಿ ಸಿದ್ದರಾಮಯ್ಯ ಗೆದ್ದರೆ ಐದು ವರ್ಷದವರೆಗೆ ಅವರೇ ಮುಖ್ಯಮಂತ್ರಿ. ಒಂದೊಮ್ಮೆ ಜಾಕ್ ಪಾಟ್ ಹೊಡೆದರೆ ಮಹಾನಾಯಕನ ಬಳಿ ಇರುವ ಪಕ್ಷದ ಸಾರಥ್ಯವನ್ನು ಕಿತ್ತು ಶಿಷ್ಯನೊಬ್ಬನ ಶಿರಕ್ಕೆ ಕಟ್ಟುತ್ತಾರೆ. ಇವೆರಡೂ ಆಗದೆ ಸೋತರೆ ಅವರ ಆಪ್ತರೊಬ್ಬರು ಮುಖ್ಯಮಂತ್ರಿ ಪಟ್ಟಕ್ಕೇರುತ್ತಾರೆ. ಅಲ್ಲಿಗೆ ಮಹಾನಾಯಕನ ಮಹಾದಾಸೆ ಸದ್ದಿಲ್ಲದೆ ಸಮಾಧಿ ಸೇರುತ್ತದೆ ಎನ್ನುತ್ತವೆ ಕಾಂಗ್ರೆಸ್ ಉನ್ನತ ಮೂಲಗಳು.
ಕಡೆಯದಾಗಿ ನೆನಪಾಗಿದ್ದು…
ದೆಹಲಿಯ ಕರ್ನಾಟಕ ಭವನದಲ್ಲಿ ಲೋಕಭೀರಾಮವಾಗಿ ಮಾತನಾಡುತ್ತಾ ಕುಳಿತಿದ್ದಾಗ ಹಿರಿಯ ರಾಜಕಾರಣಿಯೊಬ್ಬರು ‘ಸಿದ್ದರಾಮಯ್ಯ ಅವರಿಂದ ಕೇಳಿ ಪಡೆಯಬೇಕಷ್ಟೇ. ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ’ ಎಂದಿದ್ದರು. ಈ ಲೇಖನ ಬರೆಯುವಾಗ ಅವರ ಮಾತು ನೆನಪಾಯಿತು.

0 Comments