ಸಿದ್ದರಾಮಯ್ಯಗೆ ಕೆಎನ್ ರಾಜಣ್ಣ ಆವಾಜ್!

Dharaneesh Bookanakere |

Feb 26, 2025 | Political Diary

Dharaneesh Bookanakere

Feb 26, 2025 | Political Diary

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಗಳಸ್ಯ ಕಂಟಸ್ಯ. ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಆವಾಜ್ ಹಾಕುತ್ತಾರಾ ಎನ್ನುವ ಅನುಮಾನ ಬರಬಹುದು. ಆದರೆ ರಾಜಣ್ಣ, ಸಿದ್ದರಾಮಯ್ಯ ಮೇಲೆ ಆಕ್ರೋಶಭರಿತವಾಗಿ ಮಾತನಾಡಿರುವುದು ನಿಜ.

ರಾಜ್ಯದಲ್ಲಿ ಈಗ ಅಧಿಕಾರ ಹಂಚಿಕೆ ಬಗ್ಗೆ ತರಾವರಿ ಚರ್ಚೆಗಳು ನಡೆಯುತ್ತಿವೆ. ಒಬ್ಬರು ತಾವೇ ಹೋಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಕೇಳಿಕೊಂಡು ಬಂದವರಂತೆ ಸಿಎಂ ಆಗಿ ಸಿದ್ದರಾಮಯ್ಯ ಅವಧಿ ಎರಡೇ ವರ್ಷ ಎನ್ನುತ್ತಾರೆ. ಇನ್ನೊಬ್ಬರು ಫಿಫ್ಟಿ-ಫಿಫ್ಟಿ ಒಪ್ಪಂದವಾಗಿದೆ, ಎರಡೂವರೆ ವರ್ಷ ಎನ್ನುತ್ತಾರೆ. ಮತ್ತೊಬ್ಬರು ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆ ಮುರಿಯುವವರೆಗೆ ಸಿದ್ದರಾಮಯ್ಯ ಕದಲುವುದಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡುತ್ತಾರೆ. ಮಗದೊಬ್ಬರು ಎರಡಲ್ಲ ಮೂರು ವರ್ಷ ಅಂತಾ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುತ್ತಾರೆ. ಸಿದ್ದರಾಮಯ್ಯ ಆಪ್ತರು ಇವೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿ ಐದು ವರ್ಷಕ್ಕೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಬಹುಪರಾಕ್ ಹಾಕುತ್ತಾರೆ.

ಇದು ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವೆ ವಾಕ್ಸಮರಕ್ಕೂ ವೇದಿಕೆ ಒದಗಿಸುತ್ತಿದೆ ಅಲ್ವಾ? ಇಂಥದೇ ಒಂದು ಸಂದರ್ಭದಲ್ಲಿ ಕೆಎನ್ ರಾಜಣ್ಣ ಎದುಸಿರು ಬಿಟ್ಟುಕೊಂಡು ಸಿಎಂ ಗೃಹ ಕಚೇರಿಗೆ ಬಂದಿದ್ದಾರೆ. ಸೀದಾ ಸಿಎಂ ಬಳಿ ಹೋದವರೇ ‘ನೀವೇನೋ ಜಾತ್ರೆ ಮುಗಿಸಿಕೊಂಡು ಹೋಗಿಬಿಡುತ್ತೀರಿ, ನಮ್ಮ ಕತೆ ಏನು? ಎಂದು ಕೇಳಿದ್ದಾರೆ.

ಯಾವತ್ತೂ ತಮ್ಮೆದುರು ಏರು ದನಿಯಲ್ಲಿ ಮಾತನಾಡಿಲ್ಲದ, ಖುದ್ದಾಗಿ ಮುಂದೆ ನಿಂತು ಸಿದ್ದರಾಮಯ್ಯೋತ್ಸವದ ತಯಾರಿ ನೋಡಿಕೊಂಡಿದ್ದ, ಪ್ರತಿಹಂತದಲ್ಲೂ ತಮ್ಮ ನಾಯಕತ್ವ ಬೆಂಬಲಿಸಿದ್ದ ರಾಜಣ್ಣ ಇದ್ದಕ್ಕಿದ್ದಂತೆ ರೋಷದಲ್ಲಿ ಮಾತನಾಡುವುದನ್ನು ಕಂಡು ಸಿದ್ದರಾಮಯ್ಯ ಗಲಿಬಿಲಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಪಕ್ಕವಾದ್ಯಗಳಂತಿರುವ ಸಚಿವರಾದ ಜಮೀರ್ ಅಹಮದ್ ಮತ್ತು ಭೈರತಿ ಸುರೇಶ್ ಎಸಿಯಲ್ಲಿದ್ದೂ ಬೆವರಿದ್ದಾರೆ. ಸಿದ್ದರಾಮಯ್ಯ ತಕ್ಷಣವೇ ಸಿಬ್ಬಂದಿಗೆ ಎಲ್ಲರನ್ನು ಹೊರಗೆ ಕಳಿಸಿ, ಬಾಗಿಲು ಹಾಕುವಂತೆ ಸೂಚಿಸಿ ‘ಏನಾಯ್ತು ಏಕೆ ಹೀಗೆ ಮಾತಾಡ್ತಿದೀಯಾ?’ ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಅಧಿಕಾರ ಹಂಚಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನೀವು ಮಾತ್ರ ಸುಮ್ಮನೆ ಇದ್ದೀರಿ. ನೀವೇನೋ ನಿಮ್ಮ ಕೆಲಸ ಮುಗಿದ ಮೇಲೆ ಹೊರಟುಹೋಗುತ್ತೀರಿ. ಬೇಕಾದರೆ ಬೆಂಗಳೂರಿನಲ್ಲಿ ಇರುತ್ತೀರಿ, ಇಲ್ಲದಿದ್ದರೆ ಮೈಸೂರಿಗೆ ಹೋಗಿ ಸೆಟಲ್ ಆಗಿಬಿಡುತ್ತೀರಿ. ಆದರೆ ನಿಮ್ಮನ್ನೇ ನಂಬಿಕೊಂಡಿರುವ ನಾಯಕರ ಪಾಡೇನು? ಇಷ್ಟಕ್ಕೂ ಡಿಕೆ ಶಿವಕುಮಾರ್ ಸಿಎಂ ಆದರೆ ನಾವೆಲ್ಲಾ ಏನು ಮಾಡೋಕಾಗುತ್ತೆ? ಹೈಕಮಾಂಡ್ ಮಟ್ಟದಲ್ಲಿ ನಿಜವಾಗಿಯೂ ನಡೆದಿರುವುದು ಏನು ಅಂತಾ ಹೇಳಿಬಿಡಿ. ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.

ರಾಜಣ್ಣ ಮಾತನ್ನು ಕೇಳಿಸಿಕೊಂಡ ಸಿದ್ದರಾಮಯ್ಯ, ‘ಸೋನಿಯಾ ಗಾಂಧಿ ಅವರಾಗಲಿ, ರಾಹುಲ್ ಗಾಂಧಿ ಅವರಾಗಲಿ ನನಗೆ ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಏನನ್ನೂ ಹೇಳಿಲ್ಲ. ಡೋಂಟ್ ವರಿ’ ಎಂದಿದ್ದಾರೆ. ಆ ಮೂಲಕ ಸೋನಿಯಾ ಅಥವಾ ರಾಹುಲ್ ಗಾಂಧಿ ಹೇಳಿದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವೆ, ಇಲ್ಲದಿದ್ದರೆ ಇಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾತಿನಿಂದ ತೃಪ್ತರಾದ ರಾಜಣ್ಣ ನಗುನಗುತ್ತಾ ಕಾಫಿ ಕುಡಿದು ಹೊರಗೆ ಹೋಗಿದ್ದಾರೆ. ಅದಾದ ಮೇಲೆ ಅವರು ಇನ್ನಷ್ಟು ಜೋರಾಗಿ ಸಿದ್ದರಾಮಯ್ಯ ಪರ ವಕಾಲತ್ತು ವಹಿಸುತ್ತಿದ್ದಾರೆ.

ಕೆಲವೊಮ್ಮೆ ಆಪ್ತರ ಕೋಪದಲ್ಲಿ ನಿಜವಾದ ಕಾಳಜಿ ಇರುತ್ತದೆ. ಕೂತು ಮಾತನಾಡಿ, ಇರುವ ಗೊಂದಲಗಳನ್ನು ಬಗೆಹರಿಸಬೇಕು. ಕೋಪಗೊಂಡವರನ್ನು ಸರಿಯಾದ ರೀತಿಯಲ್ಲಿ ಸಮಾಧಾನಪಡಿಸಬೇಕು. ಈ ಕಲೆ ರಾಜಕೀಯಕ್ಕೆ ಹೆಚ್ಚು ಅಗತ್ಯ. ಕರಗತ ಮಾಡಿಕೊಂಡವರಿಗೆ ರಾಜಕೀಯದಲ್ಲಿ ಆಯುಷ್ಯ ಹೆಚ್ಚು. ಸಿದ್ದರಾಮಯ್ಯ ಅವರಿಗೆ ಅದು ಸಿದ್ದಿಸಿದಂತಿದೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿಶ್ವವಿದ್ಯಾಲಯಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಕಾರ್ಯಕ್ರಮಗಳ‌ ಅನುಷ್ಠಾನಕ್ಕೆ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದಂತೆ ಮುಂದುವರೆಸಿದೆ.

read more
ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಡಿಕೆ ಶಿವಕುಮಾರ್ ಅವರಿಗೆ ಸ್ವಾಮೀಜಿಗಳು ‘ನೀವು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿ ಆಗೇ ಆಗುತ್ತೀರಿ’ ಎಂದಿದ್ದಾರಂತೆ. ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಸ್ವಾಮೀಜಿಗಳು ಹಾಗೆ ಹೇಳಿದ್ದಾರಂತೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಗೊತ್ತಿದ್ದರೂ, ತಮ್ಮ ವಿರುದ್ಧದ ಕಾನೂನು ಹೋರಾಟದ ಕುಣಿಕೆಗಳು ಬಿಗಿಯಾಗಬಹದು ಎಂಬ ಭಯವಿದ್ದರೂ ಡಿಕೆಶಿ ಸಿಎಂ ಆಗುವ ಪ್ರಯತ್ನವನ್ನು ನಿಲ್ಲಿಸಿಲ್ಲವಂತೆ. ಸಿಎಂ ಸ್ಥಾನವನ್ನು ಪಡೆದೇ ತಿರಬೇಕೆಂಬ ಹಠಕ್ಕೆ ಬಿದ್ದರೆ, ಅದೂ ಸಿಗದೆ ಜೊತೆಗೆ ಇರುವ ಕೆಪಿಸಿಸಿ ಕುರ್ಚಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದೆಂದು ಅರಿವಿದ್ದರೂ ಗುರಿಯಿಂದ ಹಿಂದೆ ಸರಿಯುತ್ತಿಲ್ಲವಂತೆ.

read more
ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.

read more
Instagram
Instagram