ಡಿಕೆಶಿ ಕಾಂಗ್ರೆಸ್ ಬಿಡಲ್ಲ !

Dharaneesh Bookanakere |

Mar 3, 2025 | Political Diary

Dharaneesh Bookanakere

Mar 3, 2025 | Political Diary

ಜಪ-ತಪ-ಪರಿತಾಪಗಳು ಅವರಿಗೆ ಬೇಕಿಲ್ಲ
ರಾಜಕಾರಣಿಗಳು ಬೇರೆಯವರ ಭುಜದ ಮೇಲೆ ಬಂದೂಕಿಟ್ಟು ಗೋಲಿ ಚಲಾಯಿಸುವುದು ಜಾಸ್ತಿ. ಎಲ್ಲೋ ಯಾರಿಗೋ ಏನೋ ಸಂದೇಶ ಕೊಡಲು ಬೇರಾರನ್ನೋ ಬಳಸಿ ಬಿಸಾಡುತ್ತಾರೆ. ಡಿಕೆ ಶಿವಕುಮಾರ್-ಜಗ್ಗಿ ವಾಸುದೇವ್ ವಿಷಯದಲ್ಲೂ ಹೀಗೆ ಆಗಿರಬಹುದು. ಇದರ ಹೊರತಾಗಿ ಡಿಕೆಶಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ.

ಹತ್ತನ್ನೆರಡು ವರ್ಷಗಳಿಂದ ಡಿಕೆಶಿಯನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ. ಮೊದಲ ಪ್ರಯತ್ನವಾದದ್ದು 2016-17ರ ವೇಳೆ. ಡಿಕೆಶಿಗೆ ದೆಹಲಿಯಂತೆ ಮುಂಬೈ ಸಂಪರ್ಕವೂ ಇದ್ದುದ್ದರಿಂದ ಏಕಕಾಲಕ್ಕೆ ಎರಡೂ ಕಡೆಯಿಂದ ಕರೆಗಳು ಬರುತ್ತಿದ್ದವು. ಡಿಕೆಶಿ ಬಿಜೆಪಿ ಕರೆಗಳನ್ನು ‘ಹೋಲ್ಡ್ ನಲ್ಲಿ ಇಟ್ಟು’ ಎಐಸಿಸಿ ಕಚೇರಿಗೆ ರಿಂಗ್ ಮಾಡುತ್ತಿದ್ದರು. ಬಿಜೆಪಿ ನೀಡುತ್ತಿರುವ ಆಮಂತ್ರಣ ಪತ್ರಿಕೆ ತೋರಿಸಿ ಕಾಂಗ್ರೆಸಿನಲ್ಲಿ ಚೌಕಾಸಿ ನಡೆಸುತ್ತಿದ್ದರು.

ಡಿಕೆಶಿ ವರಸೆಗೆ ತತ್ತರಿಸಿಹೋದ ಕಾಂಗ್ರೆಸ್ ಹೈಕಮಾಂಡ್ ‘ತಾಖತ್ತಿದ್ದರೆ ಸಿದ್ದರಾಮಯ್ಯ ಅವರಿಂದ ಸಿಎಂ ಗದ್ದುಗೆಯನ್ನು ಒದ್ದು ಕಿತ್ತುಕೋ’ ಎಂದು ಹೇಳಿ ಕೈತೊಳೆದುಕೊಂಡಿತು. ಆಗ ಡಿಕೆಶಿ, ಸಿದ್ದರಾಮಯ್ಯ ಹಿಂದೆ ಎಷ್ಟು ಶಾಸಕರಿದ್ದಾರೆ? ಅಗತ್ಯ ಬಿದ್ದರೆ, ಜೆಡಿಎಸ್ ಬೆಂಬಲ ಕೊಡುತ್ತಾ ಎನ್ನುವ ಪರೀಕ್ಷೆ ಮಾಡಬೇಕಿತ್ತು. ಸಿದ್ದರಾಮಯ್ಯ ಜೊತೆಗೇ ಇದ್ದ ‘ಡೈರಿ ಖ್ಯಾತಿಯ ಕ್ರೀಡಾಪಟು’ಗೆ ಸುಪಾರಿ ಕೊಟ್ಟರು. ‘ತಾನು ಕಳ್ಳ ಪರರನ್ನು ನಂಬ..’ ಎಂಬ ಮಾತಿನಂತೆ ಡಿಕೆಶಿಗೆ ‘ಕ್ರೀಡಾಪಟು ಯಾಮಾರಿಸಿಬಿಡಬಹುದೆಂದು’ ಎಂಬ ಅನುಮಾನವೂ ಇತ್ತು. ಅದಕ್ಕಾಗಿ ಡಿಕೆ ರವಿ ಕೇಸಿನಲ್ಲಿ ಸಿದ್ದರಾಮಯ್ಯರಿಂದ ಲಾಭ ಮಾಡಿಕೊಂಡಿದ್ದ ಸಚಿವರೊಬ್ಬರಿಗೆ ‘ಕ್ರೀಡಾಪಟು ಜೊತೆ ನೀವೂ ಪದ್ಮನಾಭನಗರಕ್ಕೆ ಹೋಗಿ ಬನ್ನಿ’ ಎಂದು ಕೇಳಿಕೊಂಡರು. ತಮಾಷೆ ಏನೆಂದರೆ, ಆ ಸಚಿವರೇ ‘ಈಗ ಹೊರಟೆ, ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಇದೆ’ ಎಂಬಿತ್ಯಾದಿ ಸಬೂಬು ಹೇಳಿ ಡಿಕೆಶಿಯನ್ನು ಯಾಮಾರಿಸಿಬಿಟ್ಟರು. ನಂಬಿಕಸ್ಥ ಅಧಿಕಾರಿಯೊಬ್ಬರು ವಿಷಯ ಮುಟ್ಟಿಸಿದಾಗ ‘ಎಲ್ಲಾ ಜಾತಿ ಕಣಪ್ಪ…’ ಎಂದು ತಣ್ಣಗೆ ಉತ್ತರಿಸಿದ ಸಿದ್ದರಾಮಯ್ಯ ಮರುಕ್ಷಣವೇ ಅವರದೇ ಶೈಲಿಯಲ್ಲಿ ಡಿಕೆಶಿ ಕಾರ್ಯತಂತ್ರಗಳನ್ನು ಪುಡಿಪುಡಿ ಮಾಡಿದರು.

ಈ ನಡುವೆ ಹೈಕಮಾಂಡ್ ಕಣ್ಣಲ್ಲಿ ಡಿಕೆಶಿ ಕುಬ್ಜವಾಗಿ ಕಂಡದ್ದು ಸುಳ್ಳಲ್ಲ. ಮತ್ತೆ ಹೈಕಮಾಂಡ್ ಮನ ಗೆಲ್ಲಬೇಕು ಎನ್ನುವ ಕಾರಣಕ್ಕಾಗಿಯೇ ಡಿಕೆಶಿ 2018ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಡೆವರೆಗೂ ಬಂಡೆಯಂತೆ ನಿಂತಿದ್ದು. ಬಿಜೆಪಿ 2018ರ ಚುನಾವಣೆಯ ಮುನ್ನ ಮತ್ತು ನಂತರ ಡಿಕೆಶಿಯನ್ನು ಸೆಳೆದು ಸ್ವತಂತ್ರವಾಗಿ ಸರ್ಕಾರ ರಚಿಸಬೇಕೆಂದು ಬಯಸಿತ್ತು. ಒಂದೆಡೆ ಬಿಜೆಪಿ ಹೈಕಮಾಂಡ್, ಬಂಡೆಯನ್ನು ಉಂಡೆಯಾಗಿ ಉರುಳಿಸಿಕೊಂಡು ಬರುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇನ್ನೊಂದೆಡೆ ಯಡಿಯೂರಪ್ಪ ಬಿಡಿಬಿಡಿಯಾಗಿ ಆಪರೇಷನ್ ಕಮಲ ಮಾಡಿಬಿಟ್ಟಿದ್ದರು. ಡಿಕೆಶಿ ಬಿಜೆಪಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವುದಕ್ಕಿಂತ ಕಾಂಗ್ರೆಸಿನಲ್ಲಿ ಕಾಯುವುದೇ ಒಳ್ಳೆಯದೆಂದು ನಿರ್ಧರಿಸಿ ಸುಮ್ಮನಾಗಿದ್ದರು.

ಮತ್ತೆ ಡಿಕೆಶಿ ಎದುರು ಬಿಜೆಪಿ ಪ್ರತ್ಯಕ್ಷವಾಗಿದ್ದು ಒಂದು ಕೈಯಲ್ಲಿ ಆಮಂತ್ರಣ ಇನ್ನೊಂದು ಕೈಯಲ್ಲಿ ಕಾನೂನಿನ ಕುಣಿಕೆಗಳನ್ನು ಹಿಡಿದು. ಆಗ ಇಂಥದೊಂದು ಆಲಿಂಗನಕ್ಕೆ ಎರಡೂ ಕೈ ಅಗಲಿಸಿಕೊಂಡು ಬಂದಿದ್ದವರು ಕೇಂದ್ರದ ಮಾಜಿ ಮಂತ್ರಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ. ಕೆಲವೊಮ್ಮೆ ಬುದ್ಧಿಗಿಂತ ಭಂಡ ಧೈರ್ಯ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನುವುದು ಇದಕ್ಕೆ ಇರಬೇಕು. ಡಿಕೆಶಿ ಭಂಡ ಧೈರ್ಯದಿಂದ ಬಿಜೆಪಿ ಆಹ್ವಾನವನ್ನು ನಿರಾಕರಿಸಿದರು. ಅದಕ್ಕಿಂತಲೂ ಹೆಚ್ಚಾಗಿ ಡಿಕೆಶಿಗೆ ಅದ್ಯಾಕೋ ಏನೋ ಬಿಜೆಪಿಯನ್ನು ಕಂಡರೆ ಮೊದಲಿಂದಲೂ ‘ಅಸ್ಪೃಶ್ಯ’ ಭಾವ ಇದ್ದೇ ಇತ್ತು. ಇವೆಲ್ಲಾ ಆದಮೇಲೆ ಜೈಲಿಗೆ ಹೋಗಿ ಬಂದರು. ಸ್ವಲ್ಪದಿನ ಕಾದು ಬಹಳ ಕಷ್ಟಪಟ್ಟು ಕೆಪಿಸಿಸಿ ಅಧ್ಯಕ್ಷರಾದರು. ಅದೇ ಕೊನೆ, ಬಿಜೆಪಿ ಸೇರುವ ಬಗ್ಗೆ ಅವರು ಕನಸಿನಲ್ಲಿಯೂ ಯೋಚಿಸಿರಲಾರರು. ಏಕೆಂದರೆ…

ಸೋನಿಯಾ ನನ್ನ ತಾಯಿಯಿಂದ್ದಂಗೆ!
ಕಾನೂನಿನ ಕುಣಿಕೆಯಿಂದ ಬಿಡಿಸಿಕೊಳ್ಳಲು ಬೆಂಗಳೂರು-ದೆಹಲಿಗೆ ಓಡಾಡಿ ಹೈರಾಣವಾಗಿದ್ದ ಡಿಕೆಶಿ, ಕೆಪಿಸಿಸಿ ಹುದ್ದೆಯನ್ನು ಪಡೆದೇ ತಿರಬೇಕೆಂದು ಸೆಣಸಾಡಿ ಗೆದ್ದಿದ್ದ ಡಿಕೆಶಿ ಒಂದು ಸಂಜೆ ದೆಹಲಿಯ ಸಂಸದರ ಪ್ಲ್ಯಾಟ್ ಕಾವೇರಿಯಲ್ಲಿ ನಿರಾಳವಾಗಿ ಮಾತನಾಡುತ್ತಿದ್ದರು. ನಡುವೆ ಸೋನಿಯಾ ಗಾಂಧಿ ಅವರ ವಿಚಾರ ಬಂತು. ತಕ್ಷಣವೇ ಡಿಕೆಶಿ ಜಾಗೃತರಾದರು. ನೀಡಿಕೊಂಡಿದ್ದ ಕಾಲುಗಳು ಮಡುಚಿಕೊಂಡವು. ಸೋಫಾ ಮೇಲೆ ಆರಾಮವಾಗಿ ಒರಗಿಕೊಂಡಿದ್ದ ದೇಹ ನೇರವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಧ್ವನಿ ಬದಲಾಯಿತು. ‘ಅವರು ರಾಜಕೀಯವಾಗಿ ನನಗೆ ಮರುಜನ್ಮ ಕೊಟ್ಟ ತಾಯಿ’ ಎಂದರು. ಮತ್ತೊಂದು ಮಾತು ಅವರ ಬಾಯಿಂದ ಹೊರಬರಲು ನೀರು ಕುಡಿಯಬೇಕಾಯಿತು. ಆಗಲೇ ಈ ಅಂಕಣಕಾರನಿಗೆ ಅನಿಸಿದ್ದು ‘ಇವರು ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ’ ಅಂತಾ.

ಡಿಕೆಶಿ ಅತ್ತಿದ್ದರಂತೆ!
ಅದು ಇನ್ನೊಂದು ಸಂಜೆ, ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಇಡಿ ಕಚೇರಿಯಲ್ಲಿ ಡಿಕೆಶಿಯ ಬಂಧನವಾಗಿತ್ತು. ಬಂಧನದ ಸುದ್ದಿ ಕೇಳಿ ಅವರ ಅಭಿಮಾನಿಗಳ ರೋಧಿಸುತ್ತಿದ್ದರು. ಆದರೆ ಡಿಕೆಶಿ ಮಾತ್ರ ನಗುನಗುತ್ತಲೇ ತುಘಲಕ್ ರಸ್ತೆಯ ಪೊಲೀಸ್ ಠಾಣೆಗೆ ತೆರಳಿದರು. ಡಿಕೆಶಿ ದೊಡ್ಡ ರಾಜಕಾರಣಿ ಮಾತ್ರವಲ್ಲ, ದೊಡ್ಡ ಉದ್ಯಮಿ ಕೂಡ. ಐಷಾರಾಮಿಯಾಗಿ ಬದುಕಿದ್ದ ಡಿಕೆಶಿ ಪೊಲೀಸ್ ಠಾಣೆಯಲ್ಲಿ, ಕೆಟ್ಟ ಸೆಖೆಯಲ್ಲಿ, ದೆಹಲಿ ಸೊಳ್ಳೆಗಳ ನಡುವೆ ಹೇಗಿದ್ದಾರೆ? ತಿಹಾರ್ ಜೈಲಿನಲ್ಲಿ ಹೇಗಿದ್ದಾರೆ? ಎನ್ನುವ ಸಹಜ ಕುತೂಹಲ ಇತ್ತು. ಅವರನ್ನು ಮಾತನಾಡಿಸಿಕೊಂಡು ಬಂದವರನ್ನು ಕೇಳಿದರೆ ‘ಅದು ಬಿಡಿ ಬಂಡೆ- ಜಗ್ಗಲ್ಲ’ ಎಂದೇ ಹೇಳುತ್ತಿದ್ದರು. ಅಂಥ ಡಿಕೆಶಿ ಒಮ್ಮೆ ಜೈಲಿನಲ್ಲಿ ಅತ್ತಿದ್ದರಂತೆ. ಅದು ಅವರನ್ನು ನೋಡಲು ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಹೋಗಿದ್ದಾಗ. ಹಾಗಾಗಿ ಕಡೆಪಕ್ಷ ಸೋನಿಯಾ ಗಾಂಧಿ ಇರುವವರೆಗಾದರೂ ಡಿಕೆಶಿ ಕಾಂಗ್ರೆಸ್ ಬಿಡಲ್ಲ ಎಂದು ವಿಶ್ವಾಸದಿಂದ ಹೇಳಬಹುದು.

‘ಹಳೆ ನಂಬರ್’ಗೆ ಕರೆ ಮಾಡಿದರೆ ಸಾಕು!
ಜಗ್ಗಿ ವಾಸುದೇವ್ ತುಂಬಾ ದಿನಗಳಿಂದ ಇಶಾ ಫೌಂಡೇಶನ್ ಗೆ ಬರುವಂತೆ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುತ್ತಿದ್ದರಂತೆ. ಸಂಸದ ಡಾ. ಕೆ. ಸುಧಾಕರ್ ಮೂಲಕವೂ ಹೇಳಿಸಿದ್ದರಂತೆ. ಆದರೆ ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ. ಸಿದ್ದರಾಮಯ್ಯ ಅವರ ಮನೆ ಕಾವೇರಿ ಕದ ತೆರೆಯಲ್ಲ ಅನ್ನೋದು ಖಾತರಿಯಾಗುತ್ತಿದ್ದಂತೆ ಜಗ್ಗಿ ವಾಸುದೇವ್ ಸೀದಾ ಸದಾಶಿವನಗರದ ಕಡೆ ಪ್ರಯಾಣ ಬೆಳೆಸಿದ್ದಾರೆ. ಮನೆ ಬಾಗಿಲಿಗೆ ಬಂದು ಕರೆದರು ಎನ್ನುವ ಕಾರಣಕ್ಕೆ ಡಿಕೆಶಿ ಶಿವರಾತ್ರಿ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಇದಿಷ್ಟು ಸಾದಾ ಸಮಾಚಾರ. ಒಂದೊಮ್ಮೆ ಡಿಕೆಶಿ ಬಿಜೆಪಿಗೆ ಹೋಗಲು ಮನಸ್ಸು ಮಾಡಿದರೆ ಯಾವ ಜಗ್ಗಿಯ ಮುಂದೆಯೂ ಬಗ್ಗಬೇಕಾಗಿಲ್ಲ. ರಾಜ್ಯ ಬಿಜೆಪಿ ಬಿಕ್ಕಟ್ಟಿನ ಸೂತ್ರಧಾರಿಯ ‘ಹಳೆ ನಂಬರ್’ಗೆ ಕರೆ ಮಾಡಿದರೆ ಸಾಕು. ಜಗ್ಗಿ ವಾಸುದೇವ್ ಅಷ್ಟು ಪ್ರಭಾವಿಯೇ ಆಗಿದ್ದರೆ ಡಾ. ಕೆ. ಸುಧಾಕರ್ ಇಷ್ಟೊತ್ತಿಗೆ ಕೇಂದ್ರದಲ್ಲಿ ಮಂತ್ರಿಯಾಗಿರಬೇಕಿತ್ತು ಎನ್ನುವುದು ಇನ್ನೊಂದು ಲೆಕ್ಕಾಚಾರ.

ಡಿಕೆಶಿ ಮಾದರಿ ಯಾವುದು?
ಅಧಿಕಾರ ಎನ್ನುವುದು ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ್, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಸದಾನಂದಗೌಡ, ಧರಂ ಸಿಂಗ್, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ರೀತಿ ಎಲ್ಲರಿಗೂ ಹುಡುಕಿಕೊಂಡು ಬರುವುದಿಲ್ಲ. ಷಡ್ಯಂತ್ರಗಳ ಮೂಲಕ ಅಧಿಕಾರ ಪಡೆದವರು ಗುಂಡೂರಾವ್, ಕುಮಾರಸ್ವಾಮಿ, ಯಡಿಯೂರಪ್ಪ ಮಾತ್ರ. ಉಳಿದಂತೆ ದೇವರಾಜ ಅರಸು, ರಾಮಕೃಷ್ಣಹೆಗಡೆ, ಬಂಗಾರಪ್ಪ, ದೇವೇಗೌಡ, ಜೆ.ಎಚ್. ಪಟೇಲ್, ಸಿದ್ದರಾಮಯ್ಯ ‘ಹಕ್ಕು ಪ್ರತಿಪಾದಿಸಿ’ ಮುಖ್ಯಮಂತ್ರಿಯಾದರು. ಈನಡುವೆ ಡಿಕೆಶಿ ಒಮ್ಮೆ ‘ಮಾಡಿದ ಕೆಲಸಕ್ಕೆ ಕೂಲಿ ಕೊಡಿ’ ಎಂದಿದ್ದರು. ಇನ್ನೊಮ್ಮೆ ‘ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು’ ಎಂದಿದ್ದರು. ‘ಕೂಲಿ ಕೊಡಿ’ ಎಂದು ಕೇಳುವುದಕ್ಕೂ ‘ಒದ್ದು ಕಿತ್ತುಕೊಳ್ಳುವೆ’ ಎನ್ನುವುದಕ್ಕೂ ಮತ್ತು ‘ಹಕ್ಕು ಪ್ರತಿಪಾದಿಸಿ ಅಧಿಕಾರ ಸಂಪಾದಿಸುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರಗಳ ಮೂಲಕ ಗದ್ದುಗೆ ಏರಿದವರು ಹೇಗೆ ಬಿದ್ದಿದ್ದಾರೆ? ಹಕ್ಕು ಪ್ರತಿಪಾದಿಸಿ ಅಧಿಕಾರ ಸಂಪಾದಿಸಿದವರ ಸಾಧನೆ ಏನು ಎಂಬ ಇತಿಹಾಸ ಕಣ್ಣೆದುರೇ ಇದೆ. ಯಾವ ಮಾದರಿ ಆರಿಸಿಕೊಳ್ಳಬೇಕೆಂಬುದು ಡಿಕೆಶಿಗೆ ಬಿಟ್ಟಿದ್ದು.

ಮಾತುಮಾತಿಗೂ ಪಕ್ಷಪೂಜೆ ಎಂದರೆ ಸಾಲದು, ಪಕ್ಷದ ಸಿದ್ದಾಂತದ ಬಗ್ಗೆಯೂ ಮಾತನಾಡಬೇಕು. ಡಿಕೆಶಿ ಎಂದಾದರೂ ಕಾಂಗ್ರೆಸ್ ಸಿದ್ದಾಂತಗಳಾದ ಜಾತ್ಯಾತೀತ, ಸಾಮಾಜಿಕ ನ್ಯಾಯ, ಬಡವರ ಕಲ್ಯಾಣ ಮತ್ತಿತರ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳಿದ್ದೀರಾ? ಡಿಕೆಶಿ ಸಿಎಂ ಆಗಲು ಒಕ್ಕಲಿಗ ನಾಯಕ ಮಾತ್ರ ಎನಿಸಿಕೊಂಡರೆ ಸಾಲದು, ಕಾಂಗ್ರೆಸ್ ನಾಯಕ ಆಗಬೇಕು, ಜನ ನಾಯಕ ಆಗಬೇಕು. ಹಾಗಾಗಲು, ಸಿದ್ದರಾಮಯ್ಯ ಎದುರು ಯಶಸ್ವಿಯಾಗಲು ವಾರವಾರವೂ ಗುಡಿ-ಗುಂಡಾರ ಸುತ್ತಿ, ವಿಭೂತಿ ಬದಲು ಕುಂಕುಮ ಇಟ್ಟುಕೊಂಡು, ಕುಂಭಮೇಳದಲ್ಲಿ ಮಿಂದು, ಜಗ್ಗಿ ವಾಸುದೇವ್ ಕಾರ್ಯಕ್ರಮಕ್ಕೆ ಹೋಗಿಬಂದರೆ ಸಾಲದು. ಇವು ಪ್ರಚಾರ ತಂದುಕೊಡಬಹುದೇ ಹೊರತು ಪ್ರಭಾವವನ್ನಲ್ಲ. ಇವ್ಯಾವೂ ಸಿಎಂ ಆಗುವ ನಾಯಕನೊಬ್ಬ ಹಾಕುವ ಪಟ್ಟುಗಳಲ್ಲವೇ ಅಲ್ಲ, ಗದ್ದುಗೆ ಧಕ್ಕಿಸಿಕೊಳ್ಳಲು ಕಳುಹಿಸುವ ಸಂದೇಶಗಳೂ ಅಲ್ಲ. ಬದಲಿಗೆ ಇವೇ ನಡೆಗಳು ಅಧಿಕಾರಕ್ಕಾಗಿ ನಡೆಸುತ್ತಿರುವ ಹಪಾಹಪಿಯಂತೆ ಕಾಣುವ ಅಪಾಯ ಇರುತ್ತದೆ. ಡಿಕೆಶಿ ಒಬ್ಬ ರಾಜಕಾರಣಿ. ಅವರಿಂದ ಜನ ನಿರೀಕ್ಷಿಸುವುದು ರಾಜಕಾರಣಿಯೊಬ್ಬ ಹಾಕಬಾಹುದಾದ ಪ್ರಬುದ್ಧ ಪಟ್ಟುಗಳನ್ನೇ ಹೊರತು ಜಪ-ತಪ-ಪರಿತಾಪಗಳನ್ನಲ್ಲ.

Recent Article

Comments

0 Comments

Submit a Comment

Your email address will not be published. Required fields are marked *

Related Article

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿಶ್ವವಿದ್ಯಾಲಯಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಕಾರ್ಯಕ್ರಮಗಳ‌ ಅನುಷ್ಠಾನಕ್ಕೆ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದಂತೆ ಮುಂದುವರೆಸಿದೆ.

read more
ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಡಿಕೆ ಶಿವಕುಮಾರ್ ಅವರಿಗೆ ಸ್ವಾಮೀಜಿಗಳು ‘ನೀವು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿ ಆಗೇ ಆಗುತ್ತೀರಿ’ ಎಂದಿದ್ದಾರಂತೆ. ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಸ್ವಾಮೀಜಿಗಳು ಹಾಗೆ ಹೇಳಿದ್ದಾರಂತೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಗೊತ್ತಿದ್ದರೂ, ತಮ್ಮ ವಿರುದ್ಧದ ಕಾನೂನು ಹೋರಾಟದ ಕುಣಿಕೆಗಳು ಬಿಗಿಯಾಗಬಹದು ಎಂಬ ಭಯವಿದ್ದರೂ ಡಿಕೆಶಿ ಸಿಎಂ ಆಗುವ ಪ್ರಯತ್ನವನ್ನು ನಿಲ್ಲಿಸಿಲ್ಲವಂತೆ. ಸಿಎಂ ಸ್ಥಾನವನ್ನು ಪಡೆದೇ ತಿರಬೇಕೆಂಬ ಹಠಕ್ಕೆ ಬಿದ್ದರೆ, ಅದೂ ಸಿಗದೆ ಜೊತೆಗೆ ಇರುವ ಕೆಪಿಸಿಸಿ ಕುರ್ಚಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದೆಂದು ಅರಿವಿದ್ದರೂ ಗುರಿಯಿಂದ ಹಿಂದೆ ಸರಿಯುತ್ತಿಲ್ಲವಂತೆ.

read more
ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.

read more
Instagram
Instagram