ತಮ್ಮ ಕಿಚನ್ ಕ್ಯಾಬಿನೆಟ್ ಸದಸ್ಯ ಎಂದೇ ಕರೆಯಲಾಗುವ ಭೈರತಿ ಸುರೇಶ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆಯಂತೆ. ಇಂಥದೊಂದು ಸಂಗತಿ ಕೇಳಿದ ತಕ್ಷಣ ಸರ್ಕಾರ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೈಕಮಾಂಡ್ ನಾಯಕರು ಸಂಪುಟದಿಂದ ಭೈರತಿ ಸುರೇಶ್ ಕೈಬಿಡುವಂತೆ ಹೇಳುತ್ತಿರಬಹುದು ಎನ್ನುವ ಅನುಮಾನ ಬರಬಹುದು. ಆದರೆ, ನಿಮಗೆ ಆಶ್ಚರ್ಯ ಆಗಬಹುದು, ಭೈರತಿ ಸುರೇಶ್ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿರುವುದು ಹೈಕಮಾಂಡ್ ಅಲ್ಲ, ಅಥವಾ ರಾಜ್ಯದ ಬೇರಾವುದೇ ಶಕ್ತಿಗಳಲ್ಲ, ಬದಲಿಗೆ ಕುರುಬರು!
ಕುರುಬರೇ ಏಕೆ ಭೈರತಿ ಸುರೇಶ್ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿ. ರಾಜ್ಯದ ಆಡಳಿತ ವ್ಯವಸ್ಥೆಯ ಒಳಹೊಕ್ಕು ನೋಡಿದಾಗ ಕುರುಬ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳು ಬೆರೆಳೆಣಿಕೆಯಷ್ಟು. ಆದರೆ ಕೆಎಎಸ್, ನಿರ್ದೇಶಕರು, ಜಂಟಿ ನಿರ್ದೇಶಕರು, ಎಫ್ ಡಿಸಿಗಳು, ಎಸ್ ಡಿಸಿಗಳು, ಮುಖ್ಯ ಇಂಜಿನಿಯರ್ ಗಳು, ಜೂನಿಯರ್ ಇಂಜಿನಿಯರ್ ಗಳು ಸೇರಿದಂತೆ ಕೆಳ ಹಂತದಲ್ಲಿ ಸಾಕಷ್ಟು ಕುರುಬ ಅಧಿಕಾರಿಗಳಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಕೆಲವು ಕಡೆ ತಾಲೂಕು ಕೇಂದ್ರಗಳಲ್ಲಿ ಕುರುಬರ ಹಾಸ್ಟೇಲ್ ಇರುವುದರಿಂದ ಅವರಿಗೆ ಓದುವುದು ಮತ್ತು ಕೆಲಸ ಗಿಟ್ಟಿಸಿಕೊಳ್ಳುವುದು ಸಾಧ್ಯವಾಗಿದೆ. ಜೊತೆಗೆ ಕುರುಬ ಸಮುದಾಯ ಅತ್ಯಂತ ಬಲಿಷ್ಠವಾಗಿ ಸಂಘಟನೆಗೊಂಡಿದೆ.
ಹೀಗೆ ಆಡಳಿತ ವ್ಯವಸ್ಥೆ ಮೇಲೆ ಪರೋಕ್ಷವಾಗಿ ಪ್ರಬಲ ಹಿಡಿತ ಹೊಂದಿದ್ದರೂ ಸಿದ್ದರಾಮಯ್ಯ ಬರುವರೆಗೂ ಯಾರೊಬ್ಬರೂ ಮುಖ್ಯಮಂತ್ರಿ ಪಟ್ಟ ಏರಲು ಸಾಧ್ಯವಾಗಿರಲಿಲ್ಲ. ಎಲ್ಲಾ ಅಡೆತಡೆ ನಡುವೆ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅದು ಎಷ್ಟು ದಿನ ಅಂತಾ ಗೊತ್ತಿಲ್ಲ. ಅಧಿಕಾರ ಹಂಚಿಕೆ ಎಂಬ ದುಃಸ್ವಪ್ನ ಆಗಾಗ ಕಾಡುತ್ತಲೇ ಇದೆ. ಅದರ ನಡುವೆ ಸಿದ್ದರಾಮಯ್ಯ ತಮ್ಮ ಸಾರ್ವಜನಿಕ ಜೀವನದಲ್ಲಿ 40 ವರ್ಷದ ಬಳಿಕ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಅದಕ್ಕೆ ಹಲವಾರು ಕಾರಣರಿರಬಹುದು ಪ್ರಮುಖ ರೂವಾರಿ ಭೈರತಿ ಸುರೇಶ್ ಎನ್ನುವುದು ಕುರುಬ ಸಮುದಾಯದ ಮುಖಂಡರ, ಮಠಾಧೀಶರ, ಅಧಿಕಾರಿಗಳ ಅಭಿಪ್ರಾಯ.
ಇದಲ್ಲದೆ ಭೈರತಿ ಸುರೇಶ್ ವರ್ಗಾವಣೆ ವಿಷಯದಲ್ಲಿ ಮೂಗು ತುರಿಸುತ್ತಾರೆ. ಮುಖ್ಯಮಂತ್ರಿ ಕಚೇರಿಯ ಕಡತಗಳಲ್ಲಿ ಕೈಯಾಡಿಸುತ್ತಾರೆ. ಸಿಎಂ ಕಚೇರಿಯಲ್ಲಿ ಕುರುಬ ಅಧಿಕಾರಿಗಳನ್ನು ನಿಯೋಜಿಸಿಕೊಂಡು ತಮ್ಮದೇ ಪಾರುಪತ್ಯ ಮಾಡುತ್ತಾರೆ ಎಂಬ ದೂರುಗಳೂ ಇವೆ. ಈ ಆಕ್ಷೇಪಗಳನ್ನು ಉತ್ಪ್ರೇಕ್ಷೆ ಎನ್ನಬಹುದೇ ಹೊರತು ಸಂಪೂರ್ಣವಾಗಿ ಅಲ್ಲಗೆಳೆಯಲು ಸಾಧ್ಯವಿಲ್ಲ. ಹಾಗಾಗಿ ಇವು ಕೂಡ ಭೈರತಿ ಸುರೇಶ್ ವಿರುದ್ದ ಅಸಮಾಧಾನ ಉಂಟಾಗಲು ಕಾರಣವಾಗಿವೆ.
ಭೈರತಿ ಸುರೇಶ್ ಇಲ್ಲದಿದ್ದರೆ ಮೂಡಾ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ, ಅಥವಾ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಸಿದ್ದರಾಮಯ್ಯ ಮುಜುಗರ ಪಡಬೇಕಾದ ಪ್ರಮೇಯವೂ ಸೃಷ್ಟಿಯಾಗುತ್ತಿರಲಿಲ್ಲ. ವರ್ಗಾವಣೆ ಮತ್ತು ಸಿಎಂ ಕಚೇರಿ ವಿಷಯದಲ್ಲೂ ಅನಗತ್ಯ ವಿವಾದ ಹುಟ್ಟಿಕೊಳ್ಳುತ್ತಿರಲಿಲ್ಲ ಎನ್ನುವುದು ಸಮುದಾಯದವರ ಬಲವಾದ ನಂಬಿಕೆ.
ಒಬ್ಬ ಭೈರತಿ ಸುರೇಶ್ ಗಾಗಿ ಸಿದ್ದರಾಮಯ್ಯ ಕೂತಿರುವ ಮುಖ್ಯಮಂತ್ರಿ ಕುರ್ಚಿಯ ಕಾಲು ಅಲುಗಾಡಬಾರದು. ನಾವು ಕುರಿ ಬಲಿ ಕೊಟ್ಟು ದೇವರನ್ನು ಒಲಿಸಿಕೊಳ್ಳುವ ಜನ. ಭೈರತಿ ಸುರೇಶ್ ಬಲಿ ಕೊಟ್ಟಾದರೂ ಸರಿ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳಬೇಕು ಎಂದು ಕುರುಬರು ಸಿದ್ದರಾಮಯ್ಯ ಮೇಲೆ ಸಚಿವ ಸಂಪುಟ ಪುನರ್ ರಚನೆ ವೇಳೆ ಮೊದಲು ಭೈರತಿ ಸುರೇಶ್ ಹೆಸರು ಕೈಬಿಡಿ ಎಂದು ಹೇಳುತ್ತಿದ್ದಾರಂತೆ.
ಸಮುದಾಯದವರು ಮೊದಲ ಸಲ ಹೀಗೆ ಹೇಳಿದಾಗ ಸ್ವತಃ ಸಿದ್ದರಾಮಯ್ಯ ಅವರಿಗೆ ಶಾಕ್ ಆಗಿದೆ. ನಂತರ ಅವರ ಆಪ್ತರು ಭೈರತಿ ಸುರೇಶ್ ಕೈಬಿಡುವುದರ ಹಿಂದಿನ ಅಜೆಂಡಾವನ್ನು ವಿವರಿಸಿದ್ದಾರಂತೆ. ಸಿದ್ದರಾಮಯ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ.

0 Comments