ಸುದ್ದಿ ಮನೆಯ ಸಂಕಟ; ಇದ್ದ ಮೂರೇ ಜನದಲ್ಲಿ ಹೇಳುವವರು ಯಾರು?

Dharaneesh Bookanakere |

Feb 13, 2025 | Media Diary

Dharaneesh Bookanakere

Feb 13, 2025 | Media Diary

ಅಂದು ದೆಹಲಿಯ ಪ್ರಧಾನಿ ನಿವಾಸದಲ್ಲಿ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಲು ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು. ಪ್ರಧಾನಿ ಮೋದಿ, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ (ಆಗ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷವಾಗಿರಲಿಲ್ಲ. ಖರ್ಗೆ ಲೋಕಸಭೆಯಲ್ಲಿದ್ದರು) ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಜೆಐ ದೀಪಕ್ ಮಿಶ್ರಾ ಉಪಸ್ಥಿತರಿದ್ದರು. ಹಿಂದಿನ ನಿರ್ದೇಶಕ, 1984ನೇ ಬ್ಯಾಚ್ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನ ಸೃಷ್ಟಿಸಿದ್ದ ವಿವಾದಗಳು ಮತ್ತು ಬಹಳ ದಿನಗಳಿಂದ ಹುದ್ದೆ ಖಾಲಿ ಇದ್ದುದರಿಂದ 2018ರಲ್ಲಿ ಯಾರು ಸಿಬಿಐ ನಿರ್ದೇಶಕರಾಗುತ್ತಾರೆ ಎನ್ನುವ ಕುತೂಹಲ ರಾಷ್ಟ್ರ ರಾಜಧಾನಿಯ ಚಳಿಗೆ ಸೆಡ್ಡು ಹೊಡೆದಿತ್ತು. ಮೋದಿ-ಅಮಿತ್ ಶಾ ಕಣ್ಸನ್ನೆಯಂತೆ ಕೆಲಸ ಮಾಡುವ ಗುಜರಾತ್ ಕೇಡರ್ ಅಧಿಕಾರಿ ಬರಬಹುದೆಂಬ ಗುಲ್ಲು ಇತ್ತು.

ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಬ್ರೇಕ್ ಮಾಡಲು ಹಪಹಪಿಸುತ್ತಿದ್ದವು. ಅದು ಕರ್ನಾಟಕಕ್ಕೆ ಮಹತ್ವದ ಸುದ್ದಿ ಅಲ್ಲ ಎಂದು ನಾನು ಕರ್ನಾಟಕ ಭವನದಲ್ಲಿ ಕುಳಿತಿದ್ದೆ. ಬಹುತೇಕ ಕರ್ನಾಟಕದ ಎಲ್ಲಾ ಪತ್ರಕರ್ತರು ಅಲ್ಲೇ ಪಟ್ಟಂಗ ಹೊಡೆಯುತ್ತಿದ್ದೆವು. ಅಷ್ಟರಲ್ಲಿ ನಾನಾಗ ಕೆಲಸ ಮಾಡುತ್ತಿದ್ದ ನ್ಯೂಸ್ 18 ದೆಹಲಿ ಬ್ಯುರೋದಿಂದ ಫೋನ್ ಬಂತು. ‘ಕೂಡಲೇ ಖರ್ಗೆ ಮನೆಗೆ ಹೋಗಿ. ಕನ್ನಡದಲ್ಲಿ ಮಾತನಾಡಿಸಿ ಸುದ್ದಿ ತೆಗಿಯಿರಿ. ಬೇರೆ ಯಾವ ಚಾನಲ್ ಗೂ ಈ ಚಾನ್ಸ್ ಇಲ್ಲ. ನಮ್ಮದೇ Exclusive’ ಎಂದು ಎಕ್ಸೈಟ್ ಆಗಿ ಹೇಳಿದರು.

ನಾನು ಸಫ್ದರ್ ಜಂಗ್ ಲೇನ್ ನಲ್ಲಿದ್ದ ಖರ್ಗೆಯವರ ಮನೆ ಬಳಿ ಹೋದಾಗ ಅಲ್ಲಿ ಪ್ರತಿಭಟನೆ ನಡೆಯುತ್ತಿದೆಯೇನೋ ಎನ್ನುವಂತೆ ಗೇಟ್ ಎದುರು ರಾಷ್ಟ್ರೀಯ ಮಾಧ್ಯಮದ ವರದಿಗಾರರು ಜಮಾಯಿಸಿದ್ದರು. ಖರ್ಗೆ ಯಾರನ್ನೂ ಒಳಬಿಡಬೇಡಿ ಎಂದು ಕಟ್ಟಪ್ಪಣೆ ವಿಧಿಸಿದ್ದರು. ಆದರೂ ನಾನು ಕರ್ನಾಟಕದವನಾಗಿದ್ದರಿಂದ ನನ್ನನ್ನು ನೋಡಿದ ಕೂಡಲೇ ಪೊಲೀಸ್ ಅಧಿಕಾರಿ ಗೇಟು ಸರಿಸಿದರು. ಅಂದು ನನಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ನ್ಯಾಷನಲ್ ಮೀಡಿಯಾ ವರದಿಗಾರರು ಕಾಲ್ ಮಾಡಿ, ಮೆಸೇಜ್ ಮಾಡಿ ಸುದ್ದಿ ಗೊತ್ತಾದ ತಕ್ಷಣ ತಿಳಿಸು ಎಂದು ಕೇಳಿಕೊಂಡರು.

ಒಳಗೆ ಮಲ್ಲಿಕಾರ್ಜುನ ಖರ್ಗೆ ಏನನ್ನೋ ಓದುತ್ತಾ ಕುಳಿತಿದ್ದರು. ನನ್ನನ್ನು ನೋಡಿ ‘ಬನ್ನಿ, ಕೂರಿ’ ಎಂದರು. ಮಾತು ಮೋದಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸುತ್ತಿ ಬರುವಷ್ಟರಲ್ಲಿ ಅವರ ಸಹಾಯಕ ತಿರುಪತಿ ಲಡ್ಡು ತಂದಿಟ್ಟರು. ನಾನು ಖರ್ಗೆ ಅವರ ದೆಹಲಿ ಮನೆಯಲ್ಲಿ ಏನನ್ನಾದರೂ ತಿನ್ನದೆ, ಹಾಗೇ ಬಂದ ಉದಾಹರಣೆಯೇ ಇಲ್ಲ. ‘ಏನ್ ಸಾರ್ ತಿರುಪತಿ ಲಡ್ಡು…’ ಎಂದೆ. ನನ್ನ ಮಾತಿನಲ್ಲಿ ಕೊಂಕಿತ್ತು. ಏಕೆಂದರೆ ಬುದ್ದಿಸಂ ಅನುಸರಿಸುವ ಅವರ ಮನೆಯಲ್ಲಿ ಬೇರೆ ದೇವರ ಪ್ರಸಾದಗಳು ಇರುತ್ತಿರಲಿಲ್ಲ. ನನ್ನ ಮಾತಿನ ಅರ್ಥ ಗ್ರಹಿಸಿದ ಅವರು ‘ಯಾರೋ ಬರ್ತಾರೆ, ತರ್ತಾರೆ…’ ಎಂದು ಮಾತನ್ನು ಮೊಟಕುಗೊಳಿಸಿದರು. ಮುಂದಿನದು ‘ಅದನ್ನು ಖಾಲಿ ಮಾಡಬೇಕಲ್ಲ, ಅದಕ್ಕೆ ನಿಮಗೆ ಕೊಟ್ಟಿದ್ದೇವೆ…’ ಎನ್ನುವ ರೀತಿ ಇತ್ತು. ಅವರೂ ನಕ್ಕರು, ನಾನೂ ನಕ್ಕೆ.

ಸಿಹಿ ನನ್ನ ದೌರ್ಬಲ್ಯ. ಆದರೆ ಅವರು ನನಗಿಂತ ಬೇಗ ತಿಂದು ಮುಗಿಸಿ ಇನ್ನೂ ಸ್ವಲ್ಪ ತರಲು ಹೇಳಿದರು. ಸೆಕೆಂಡ್ ರೌಂಡ್ ಲಡ್ಡು ಮುಗಿಯುತ್ತಾ ಬಂದರೂ ನಾನು ಮಾತ್ರ ಮುಖ್ಯ ವಿಷಯಕ್ಕೆ ಬಂದಿರಲಿಲ್ಲ. ಅವರೇ ‘ಏನ್ ಸಮಾಚಾರ?’ ಎಂದರು. ‘ನೀವೇ ಹೇಳಿ ಸಾರ್… ಇವತ್ತಿನ ಸಭೆಯಲ್ಲಿ ಏನಾಯಿತು?’ ಎಂದೆ.

‘ನೋಡಿ, ಸಭೆಯಲ್ಲಿ ಇದ್ದದ್ದು ನಾವು ಮೂರೇ ಜನ. ನೀವಂತೂ ಮೋದಿ ರೀಚ್ ಆಗೋಕಾಗಲ್ಲ, ಸಿಜೆಐ ಕೂಡ ಬಾಯಿ ಬಿಡೋಲ್ಲ. ಏನಾದ್ರೂ ಈ ವಿಷಯ ಹೊರಗಡೆ ಬಂತು ಅಂದರೆ, ಅದು ನಾನೇ ಹೇಳಿರುವುದು ಅಂತಾ ಗೊತ್ತಾಗುತ್ತೆ. ಈಗ ನಾನು ಸಭೆಯಲ್ಲಿ ಏನು ಚರ್ಚೆ ಆಯ್ತು ಅಂತಾ ಹೇಳಬೇಕಾ?’ ಎಂದು ಪ್ರಶ್ನಿಸಿದರು. ಇಂಥಾ ಸೂಕ್ಷ್ಮ ಸಂದರ್ಭಗಳನ್ನು ನಿಭಾಯಿಸುವುದು ಕಷ್ಟದ ಕೆಲಸ. ಬಹುತೇಕ ಸಭೆಗಳು ಹೀಗೆ ಆಗುತ್ತವೆ. ಆದರೂ ಕೆಲವರು ಅಲ್ಲೇ ಪಕ್ಕದಲ್ಲೇ ಕುಳಿತಿದ್ದವರಂತೆ ವರದಿ ಮಾಡುತ್ತಾರೆ. ಟಿವಿಯವರು ಅವಸರಕ್ಕೆ ಬಿದ್ದು ಅವಾಂತರ ಸೃಷ್ಟಿಸುತ್ತಾರೆ. ಪತ್ರಿಕೆಯವರು ಟಿವಿಯನ್ನು ಬಯ್ಯುತ್ತಾ ಬಯ್ಯುತ್ತಾ ಅವರು ತೋಡಿದ ಖೆಡ್ಡಾದಲ್ಲೇ ಬಿದ್ದಿರುತ್ತಾರೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಗ್ಯಾರಂಟಿ ಟಿವಿ ಯಶಸ್ವಿಯಾಗಲಿ

ಗ್ಯಾರಂಟಿ ಟಿವಿ ಯಶಸ್ವಿಯಾಗಲಿ

ಕಳೆದ ಕೆಲವು ವರ್ಷಗಳ ಚುನಾವಣಾ ರಾಜಕಾರಣ “ಗ್ಯಾರಂಟಿ” ಎಂಬ ಪದವನ್ನು ಹೆಚ್ಚು ಚಾಲ್ತಿಗೆ ತಂದಿದೆ. ಗ್ಯಾರಂಟಿ ಸ್ಕೀಮ್ ಗಳನ್ನು ಒಪ್ಪುವವರು, ಬೇಡ ಎನ್ನುವವರು..ಹೀಗೆ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ…ಇಲ್ಲ ಬರೆದಿದ್ದಾರೆ. ಆ ಕಾರಣಕ್ಕೆ ಈ ಪದ‌ ತುಂಬಾ ಕ್ಯಾಚಿ ಎನ್ನಿಸಿ ಈಗ ಸುದ್ದಿ‌ವಾಹಿನಿಯ ಹೆಸರಾಗಿದೆ.

read more
He is a very good planter!

He is a very good planter!

ಕಾಂಗ್ರೆಸ್ ಹೈಕಮಾಂಡ್ ಪ್ರಭಾವಿ ಮುಖಂಡ ದಿವಂಗತ ಅಹಮದ್ ಪಟೇಲ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಹೈಕಮಾಂಡ್ ಪ್ರತಿನಿಧಿಗಳು ಯಾರಾದರೂ ಬರುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾಲಾಳುಗಳಾಗಿ ಸೇವೆ ಮಾಡಲು ಮುಂದೆ ನಿಂತಿರುತ್ತಿದ್ದ ಕಾಲ ಅದು.

read more
Instagram
Instagram