ಇತ್ತೀಚಿಗೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ಭಾರೀ ಸಂಚಲನ ಉಂಟುಮಾಡಿತ್ತು. ಆಗ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದರು ಎನ್ನುವುದು ವಿಶೇಷ ಮಹತ್ವ ಬರಲು ಮೊದಲ ಕಾರಣ. ಸಭೆಯಲ್ಲಿ ಸಿದ್ದರಾಮಯ್ಯ ಹಾಜರಿದ್ದದ್ದು ಇನ್ನೊಂದು ಪ್ರಮುಖ ಕಾರಣ. ವಾಸ್ತವವಾಗಿ ಅಂದು ಅಧಿಕಾರ ಹಂಚಿಕೆ ಬಗ್ಗೆ ಒಂದೇ ಒಂದಕ್ಷರ ಚರ್ಚೆಯಾಗಿಲ್ಲ. ಚರ್ಚೆಯಾಗಿದ್ದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಂಸತ್ತಿನಲ್ಲಿ ಅಮಿತ್ ಶಾ ಅವಮಾನ ಮಾಡಿದ ಬಗ್ಗೆ, ಒಳ ಮೀಸಲಾತಿ ಮತ್ತು ಜಾತಿ ಜನಗಣತಿ ವರದಿ ಜಾರಿ ಬಗ್ಗೆ, ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರ ಮೇಲೆ ಇಡಿ ಮತ್ತು ಐಟಿ ದಾಳಿ ಮಾಡಿಸುತ್ತಿರುವ ಬಗ್ಗೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಗ್ಗೆ ಮತ್ತು ಇವೆಲ್ಲವನ್ನೂ ಖಂಡಿಸಿ ಬೃಹತ್ ಸಮಾವೇಶ ನಡೆಸುವ ಬಗ್ಗೆ.
ಸಿದ್ದರಾಮಯ್ಯ ಮೇಲೆ ಸಿಟ್ಟಾಗಿದ್ದ ಪರಮೇಶ್ವರ್!
ಇದೆಲ್ಲವನ್ನು ಸಿದ್ದರಾಮಯ್ಯ ಸಮ್ಮುಖದಲ್ಲಿ ಚರ್ಚಿಸುವ ಅಗತ್ಯ ಏನಿತ್ತು? ಎಂದು ಕೇಳಬಹುದು. ಅದಕ್ಕೊಂದು ಹಿನ್ನೆಲೆ ಇದೆ. ಇದಕ್ಕೂ ಮೊದಲು ಒಳ ಮೀಸಲಾತಿ ಮತ್ತು ಜಾತಿ ಜನಗಣತಿ ವರದಿ ಜಾರಿ ವಿಷಯಗಳ ಚರ್ಚೆ ಬಂದಾಗ ಒಮ್ಮೆ ಸಿದ್ದರಾಮಯ್ಯ ಎರಡಕ್ಕೂ ನನ್ನ ವಿರೋಧ ಇಲ್ಲ, ಆದರೆ ‘ಅವರುಗಳು’ ಬಿಡುತ್ತಿಲ್ಲ ಎಂದು ಹೇಳಿದರಂತೆ. ಸಿಟ್ಟಾದ ಪರಮೇಶ್ವರ್ ‘ಜಾರಿ ಮಾಡಲು ಸಾಧ್ಯವಾಗಲ್ಲ ಎನ್ನುವುದಾದರೆ ಪ್ರಣಾಳಿಕೆಯಲ್ಲಿ ಏಕೆ ಹೇಳಿದ್ರಿ? ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದ ನಾನು ಜನಕ್ಕೆ ಏನು ಉತ್ತರ ಕೊಡಬೇಕು? ವಿಶೇಷವಾಗಿ ನನ್ನ ಸಮುದಾಯಕ್ಕೆ ಏನು ಹೇಳಬೇಕು? ಎಂದು ಆಕ್ರೋಶಭರಿತವಾಗಿ ಮಾತನಾಡಿದರಂತೆ. ಆಗಲೇ ‘ಇನ್ನೊಂದು ಸಭೆ ಮಾಡಿ ವಿವರವಾಗಿ ಚರ್ಚಿಸಿ ತೀರ್ಮಾನಿಸೋಣ’ ಎಂದು ಪರಮೇಶ್ವರ್ ಅವರನ್ನು ಸಮಾಧಾನ ಪಡಿಸಲಾಗಿತ್ತಂತೆ.
ಪರಂಗೆ ನಾಯಕತ್ವ ನೀಡಿದ ಸಿದ್ದು!
ಈ ಹಿನ್ನೆಲೆಯಲ್ಲಿ ಮತ್ತೆ ಸಭೆ ಸೇರಿ ಪರಿಶಿಷ್ಟ ಜಾತಿ ಮತ್ತು ಸಮುದಾಯದ ವತಿಯಿಂದ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮುದಾಯದ ಸಮಾವೇಶ ಮಾಡಿದ್ದರಿಂದ ಈಗಲೂ ಅಲ್ಲೇ ಆಯೋಜನೆ ಮಾಡೋಣ ಎಂಡಿದ್ದಾರೆ ಪರಮೇಶ್ವರ್. ಸಮಾವೇಶ ಪರಮೇಶ್ವರ್ ನೇತೃತ್ವದಲ್ಲೇ ನಡೆಯಲಿ ಎಂದಿದ್ದಾರೆ ಸಿದ್ದರಾಮಯ್ಯ. ಶೀಘ್ರವೇ ಸಮಾವೇಶದ ಪೂರ್ವಭಾವಿ ಸಭೆ ನಡೆಸೋಣ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಪೂರ್ವಭಾವಿ ಸಭೆಗೆ ಕೆಎನ್ ರಾಜಣ್ಣ ಸಂಚಾಲಕರ ರೀತಿಯಲ್ಲಿ ಕೆಲಸ ಮಾಡಲಿ ಎಂದಿದ್ದಾರೆ ಹೆಚ್.ಸಿ. ಮಹದೇವಪ್ಪ. ಎಲ್ಲರ ಸಲಹೆಗೂ ಸರ್ವಾನುಮತದ ಅಂಗೀಕಾರ ಸಿಕ್ಕಿದೆ. ಹೀಗೆ ಎಲ್ಲವೂ ಸುಸೂತ್ರವಾಗಿ ನಡೆದಿದ್ದಾಗ ತಿಳಿಗೊಳಕ್ಕೆ ಕಲ್ಲು ಹಾಕಿದ್ದು ಡಿಕೆ ಶಿವಕುಮಾರ್.
ಡಿಕೆಶಿ ಎಸಗಿದ ಮಹಾ ಪ್ರಮಾದ
ಡಿನ್ನರ್ ಮೀಟಿಂಗ್ ಅನ್ನು ನನ್ನ ವಿರುದ್ಧ ಹೆಣೆಯುತ್ತಿರುವ ಷಡ್ಯಂತ್ರ ಎಂದು ಭಾವಿಸಿದ ಡಿಕೆಶಿ ಹೈಕಮಾಂಡ್ ಮೂಲಕ ಸಮಾವೇಶಕ್ಕೆ ತಡೆಯಾಜ್ಞೆ ತಂದರು. ಅದು ದಲಿತ ನಾಯಕರು ಇನ್ನಷ್ಟು ಒಗ್ಗಟ್ಟಾಗುವಂತೆ ಪ್ರೇರೇಪಿಸಿತು. ಸಮಾವೇಶವನ್ನು ಮಾಡೇ ತಿರಬೇಕೆಂಬ ಪ್ರತಿಜ್ಞೆ ಮಾಡುವಂತೆ ಪುಸಲಾಯಿಸಿತು. ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಬಣ ಸಧೃಡವಾಯಿತು.
ಹಾಗೆ ನೋಡಿದರೆ ಸರ್ಕಾರ ಬಂದ ಹೊಸದರಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಸಂಬಂಧ ಈಗಿನಷ್ಟು ಸುಮಧುರವಾಗೇನೂ ಇರಲಿಲ್ಲ. ಪರಮೇಶ್ವರ್ ಇವತ್ತಿಗೂ 2013ರ ಸೋಲಿನ ಹೊಡೆತ ಮರೆತಿಲ್ಲ. ಆದರೂ ಅವರು ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿರುವುದಕ್ಕೆ ವಿಶೇಷ ಕಾರಣವಿದೆ. ಏಕೆಂದರೆ 8 ವರ್ಷ ಪಕ್ಷದ ನೊಗ ಎಳೆದಿರುವ ಅವರಿಗೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರು ಯಾವ ಸಂದರ್ಭದಲ್ಲಿ ಎಂಥ ಸನ್ಹೆಗಳನ್ನು ನೀಡಬಲ್ಲರೆಂದು ಚೆನ್ನಾಗಿ ಗೊತ್ತಿದೆ.
ಪರಮೇಶ್ವರ್ ಈಗ ಮೊದಲಿಗಿಂತ ಪಳಗಿದವರಂತೆ ಕಾಣುತ್ತಿದ್ದಾರೆ. ಹಾಸನ ಸಮಾವೇಶಕ್ಕೂ ಮುಂಚೆ ಡಿಕೆಶಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದಾಗ ‘ಎಲ್ಲವನ್ನೂ ಅವರೇ ಮಾಡಿಕೊಂಡರೆ ಪಕ್ಷದಲ್ಲಿ ನಾವೆಲ್ಲಾ ಇರುವುದು ಏಕೆ?’ ಎಂದು ಗುಟುರು ಹಾಕಿದರು. ನಿಗಮ-ಮಂಡಳಿಗೆ ನೇಮಿಸುವಾಗಲೂ ಅವರದು ಇದೇ ತಕರಾರಿತ್ತು. ಇತ್ತೀಚಿಗೆ ದಲಿತ ನಾಯಕರ ಸಭೆ, ಸಮಾವೇಶ, ಜಾತಿ ಜನಗಣತಿ ಜಾರಿ ವಿಚಾರಗಳಲ್ಲೂ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಇವೆಲ್ಲವನ್ನೂ ಮೀರಿ ಪರಮೇಶ್ವರ್ ಈಗ ಡಿಕೆಶಿ ಜೊತೆ ಇರಲು ಕಾರಣಗಳೇ ಇಲ್ಲ. ಸಿದ್ದರಾಮಯ್ಯ ನನ್ನನ್ನು ಸೋಲಿಸಿದರು, ನನಗೆ ಸಿಎಂ ಆಗುವ ಅವಕಾಶ ತಪ್ಪಿಸಿದರು ಎಂದು ರಚ್ಚೆ ಹಿಡಿದು ಮುಂದೆ ಬಂದರೂ ಬರಬಹುದಾದ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಅವರು ಸಿದ್ದರಿಲ್ಲ. ಒಂದೊಮ್ಮೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಿರಿ ಎಂದು ಹೈಕಮಾಂಡ್ ಸೂಚಿಸಿದರೆ (ಆ ಸಾಧ್ಯತೆಗಳು ಕಮ್ಮಿ) ಅವರು ಪರಮೇಶ್ವರ್ ಹೆಸರು ಸೂಚಿಸುವ ಸಾಧ್ಯತೆ ಕಿಂಚಿತ್ತಾದರೂ ಇದೆ. ಅದೇ ಡಿಕೆಶಿ ಜೊತೆ ಇದ್ದರೆ ಡಿಕೆಶಿಯೇ ಸಿಎಂ ಆಗುತ್ತಾರೆ ಹೊರತು ಪರಮೇಶ್ವರ್ ಹೆಸರು ಹೇಳುತ್ತಾರಾ? ಇದೇ ‘ನನ್ನ ಹೆಸರೇಳಬಹುದೆಂಬ’ ಸೂತ್ರ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಮತ್ತು ಎಂ.ಬಿ. ಪಾಟೀಲ್ ಅವರಿಗೂ ಅನ್ವಯಿಸುವುದು ಸಹಜ

0 Comments