ಸಾಮಾನ್ಯವಾಗಿ ಕಾಂಗ್ರೆಸ್ ಎಲ್ಲಾ ವಿಷಯದಲ್ಲೂ ಹೀಗೇ ಮಾಡುತ್ತೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಂಬಂಧಿಸಿದ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಆಂತರಿಕ ಸ್ಥಿತಿಗೆ ಹಿಡಿದ ಕನ್ನಡಿ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಕುಂಭಮೇಳಕ್ಕೆ ಹೋಗಿ ಮಿಂದೆದ್ದರೆ ಬಡತನ ನಿರ್ಮೂಲನೆ ಆಗುವುದಿಲ್ಲ’ ಎಂದು ಹೇಳಿದರು.
ಮಾಧ್ಯಮದವರು ಇದನ್ನು ವಿವಾದ ಮಾಡಿದಾಗಲೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಪ್ರಧಾನ ಮಂತ್ರಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ವಾಗ್ದಾಳಿ ನಡೆಸಿದಾಗಲೂ ಜಗ್ಗದ ಖರ್ಗೆ, ‘ನೀವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ’ ಎಂದು ತಿರುಗೇಟು ನೀಡಿದರು. ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್ ಮಾತುಗಳಿಗೆ ಒಂದು ವರ್ಗ ಮೆಚ್ಚುಗೆಯನ್ನೂ ವ್ಯಕ್ತಪಡಿಸಿತು.
ಆದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿಯೂ ಆದ ಡಿಕೆ ಶಿವಕುಮಾರ್ ಕುಟುಂಬ(ಪಿಆರ್ ತಂಡವೂ ಸೇರಿದಂತೆ) ಸಮೇತರಾಗಿ ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದರು. ಪ್ರಯಾಗ್ ರಾಜ್ ನಲ್ಲಿ ಸುತ್ತಾಡುತ್ತಿರುವ, ಸ್ನಾನ ಮಾಡುತ್ತಿರುವ ಭಿನ್ನ ಭಿನ್ನ ಫೋಟೋಗಳನ್ನು ಮಾಧ್ಯಮಗಳಿಗೆ ತಲುಪಿಸಿ ಭರ್ಜರಿ ಪ್ರಚಾರ ಪಡೆದರು. ಇವರಿಬ್ಬರ ನಡುವೆ ಕಾಂಗ್ರೆಸ್ ಪಕ್ಷದ ಬಡ ಕಾರ್ಯಕರ್ತರ ಪಾಡೇನು? ಆತ ಯಾರ ವಿಚಾರಧಾರೆಯನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರತಿಪಾದಿಸಬೇಕು?
ಇದರ ನಡುವೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯೂಟಿ ಖಾದರ್ ಕುಂಭಮೇಳಕ್ಕೆ ಹೋಗಿದ್ದು ಬಂದರು. ಉತ್ತರ ಪ್ರದೇಶ ಸ್ಪೀಕರ್ ಆಮಂತ್ರಣ ಎಂಬ ಚಂದನೆಯ ಸ್ಪಷ್ಟೀಕರಣ ಕೊಟ್ಟರು. ಈ ಬೆಳವಣಿಗೆ ಬೆನ್ನಲ್ಲೇ ವಿಧಾನಸಭೆಯ ಅರ್ಜಿ ಸಮಿತಿ ಹಾಗು ವಸತಿ ಸೌಕರ್ಯಗಳ ಸಮಿತಿಯ ಕೆಲ ಸದಸ್ಯರು ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಬಳಿ ಕುಂಭಮೇಳಕ್ಕೆ ಹೋಗಲು ಮನವಿ ಮಾಡಿಕೊಂಡಿದ್ದಾರೆ. ಪ್ರಸ್ತಾಪ ಡೆಪ್ಯೂಟಿ ಸ್ಪೀಕರ್ ಕಚೇರಿಯಿಂದ ಸ್ಪೀಕರ್ ಕಚೇರಿಗೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲು ಶಿಫಾರಸ್ಸಾಗಿದೆ.
ಸ್ವತಃ ಕುಂಭಮೇಳಕ್ಕೆ ಹೋಗಿ ಬಂದಿರುವ ಸ್ಪೀಕರ್ ಯೂಟಿ ಖಾದರ್ ಶಾಸಕರಿಗೆ ಬೇಡ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಪ್ಪಿಗೆ ನೀಡಿದರೆ ಅರ್ಜಿ ಹಾಗು ವಸತಿ ಸೌಕರ್ಯ ಸಮಿತಿಗಳ ಒಟ್ಟು 28 ಶಾಸಕರಿಗೆ ಪ್ರವಾಸಭಾಗ್ಯ ಒದಗಿಬರಲಿದೆ. ಇದಕ್ಕೆ ಕೋಟ್ಯಂತರ ರೂಪಾಯಿ ಹಣವೂ ಖರ್ಚಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ದೂರುವ ಶಾಸಕರು ಕುಂಭಮೇಳಕ್ಕೆ ಹೋದರೆ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ ‘ಬಡತನ ನಿರ್ಮೂಲನೆ’ಯಾಗುವುದೇ? ಅಥವಾ ರಾಜ್ಯದ ಹಿತದೃಷ್ಟಿಯಿಂದ ಹೋಗಬೇಡಿ ಎಂದು ಹೇಳುವ ನೈತಿಕತೆ ಡಿಕೆ ಶಿವಕುಮಾರ್ ಅವರಿಗೆ ಇದೆಯೇ? ಜನ ಈ ಬಗ್ಗೆ ಕೇಳಿದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏನು ಉತ್ತರ ಕೊಡಬೇಕು?

0 Comments