ಕುಸಿಯುತ್ತಿರುವ ಕಾರ್ಯಾಂಗದ ಕ್ಷಮತೆ

Dharaneesh Bookanakere |

Feb 27, 2025 | Officers Diary

Dharaneesh Bookanakere

Feb 27, 2025 | Officers Diary

ರಾಜ್ಯ ಸರ್ಕಾರ ಟೆಕ್ ಆಫ್ ಆಗಿಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ ಎನ್ನುವ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಕಾರ್ಯಾಂಗಕ್ಕೆ ಸಂಬಂಧಿಸಿದ ಇಂಥ ದೂರುಗಳಿಗೆ ಉತ್ತರ ಅಥವಾ ಸ್ಪಷ್ಟೀಕರಣ ಕೊಡಬೇಕಾದುದು ಶಾಸಕಾಂಗದ ಅದರಲ್ಲೂ ಆಡಳಿತಾರೂಢ ಪಕ್ಷದ ಕರ್ತವ್ಯ.

ಇದರ ಜೊತೆಗೆ ಸರ್ಕಾರವೊಂದು ನಿಧಾನವಾಗಿ ಚಲಿಸಲು ಹಲವು ಕಾರಣಗಳಿರುತ್ತವೆ. ಅಂಥವುಗಳ ಪೈಕಿ ಕಾರ್ಯಾಂಗದ ಕ್ಷಮತೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಸಂಗತಿಯೂ ಪ್ರಮುಖವಾದುದು. ಉದಾಹರಣೆಗೆ ಈ ವರ್ಷ ರಾಜ್ಯದಲ್ಲಿ ಒಟ್ಟು 8 ಐಎಎಸ್, 9 ಐಎಫ್‌ಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳು ನಿವೃತ್ತಿಯಾಗಲಿದ್ದಾರೆ. ಕೇಂದ್ರದಿಂದ ಅಷ್ಟೇ ಸಂಖ್ಯೆಯ ರಾಜ್ಯದ ಕೇಡರ್ ಅಲಾಟ್ಮೆಂಟ್ ಆಗುತ್ತದೆ. ನಂತರ ರಾಜ್ಯ ಸರ್ಕಾರ ಅವರೆಲ್ಲರಿಗೂ ಹುದ್ದೆಗಳನ್ನು ನೀಡುತ್ತದೆ. ಇದು ನಿರಂತರ ಪ್ರಕ್ರಿಯೆ.

ರಾಜ್ಯಕ್ಕೆ ನಿಯೋಜಿತರಾಗುವ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರ ಕೆಲಸ ಮಾಡಿ ವಿಧಾನಸೌಧ ತಲುಪುವಷ್ಟರಲ್ಲಿ ಅಪಾರವಾದ ಆಡಳಿತಾತ್ಮಕ ಅನುಭವ ಪಡೆದಿರಬೇಕು. ನಂತರ ಇನ್ನೂ ಹೆಚ್ಚಿನ ಅನುಭವ ಗಳಿಸಿದ ಮೇಲೆ ಅವರನ್ನು ಹಂತಹಂತವಾಗಿ ಆಯಕಟ್ಟಿನ ಜಾಗಗಳಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಗಳಿಗೆ ನೇಮಿಸಲಾಗುತ್ತದೆ.

ಈ ರೀತಿ ಬರುವ ಅಧಿಕಾರಿಗಳನ್ನು ಯಾವುದೇ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದರೂ ಅವರು ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸಬೇಕು. ಆದರೆ ಹಾಗಾಗುತ್ತಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ನೇಮಕಗೊಂಡಿರುವ ಐಎಎಸ್, ಐಎಫ್‌ಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಾಮರ್ಥ್ಯದ ಬಗ್ಗೆ ಅನುಮಾನಗಳು ಕೇಳಿಬರುತ್ತಿವೆ. ಸರ್ಕಾರ ಒಬ್ಬರೇ ಹಿರಿಯ ಅಧಿಕಾರಿಗೆ ಎರಡರಿಂದ ಮೂರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗು ಮತ್ತಿತರ ಜವಾಬ್ದಾರಿ ನೀಡುವುದರಿಂದಲೇ ‘ಇಲಾಖೆಯನ್ನು ನಿಭಾಯಿಸಲು ಸೂಕ್ತ ಅಧಿಕಾರಿಗಳು ಇಲ್ಲ’ ಎನ್ನುವ ಸಂಗತಿ ಸಾಬೀತಾಗಿದೆ.

ಇದಲ್ಲದೆ ಹೊರ ರಾಜ್ಯದಿಂದ ಬರುವ ಅಧಿಕಾರಿಗಳು ಇಲ್ಲಿ ಕೆಳ ಹಂತದಲ್ಲಿ ಕೆಲಸ ಮಾಡುವ ನೌಕರರ ಜೊತೆ, ಜನರ ಜೊತೆ ಭಾವನಾತ್ಮಕವಾದ ಸಂಬಂಧ ಬೆಳಸಿಕೊಳ್ಳುತ್ತಿಲ್ಲ. ಇದ್ದಷ್ಟು ದಿನ ಅಧಿಕಾರವನ್ನು ಅನುಭವಿಸಿ, ದುಡ್ಡು ಮಾಡಿಕೊಂಡು, ಬೆಂಗಳೂರೆಂಬ ‘ಸ್ವರ್ಗ’ದಲ್ಲಿ ಮಕ್ಕಳನ್ನು ಓದಿಸಿ ನಂತರ ಅವರವರ ಊರಿಗೆ ಹೋಗಿ ಸೆಟಲ್ ಆಗುತ್ತಾರೆ. ಅಥವಾ ಬೆಂಗಳೂರನ್ನು ಬಿಡಲು ಸಾಧ್ಯವಾಗದೆ ಇಲ್ಲೇ ವಿಶ್ರಾಂತ ಜೀವನ ಸಾಗಿಸುತ್ತಾರೆ. ನಡುವೆ ಅವರು ಈ ರಾಜ್ಯಕ್ಕೆ ಏನನ್ನಾದರೂ ಕೊಡಬೇಕು ಎಂದು ಚಿಂತಿಸುವುದಿಲ್ಲ. ಇವೆಲ್ಲಕ್ಕೂ ಅಪವಾದ ಎನ್ನುವಂಥವರು ಇದ್ದರು. ಉದಾಹರಣೆಗೆ ಡಾ. ಚಿರಂಜೀವಿ ಸಿಂಗ್. ಪಂಜಾಬ್ ಮೂಲದ ಡಾ. ಚಿರಂಜೀವಿ ಸಿಂಗ್ ಕಡೆಕಡೆಗೆ ನಿಜ ಅರ್ಥದಲ್ಲಿ ಕನ್ನಡದ ಕುವರ ಆಗಿಬಿಟ್ಟರು. ತಮ್ಮ ತಂದೆಯನ್ನು ಮಂಡ್ಯದ ನೆಲದಲ್ಲೇ ಮಣ್ಣು ಮಾಡಿದರು.

ಮುಖ್ಯವಾದ ವಿಷಯ ಏನೆಂದರೆ, ಕೆಲ ಹಂತದಲ್ಲಿ ನೇಮಕ ಮಾಡುವಾಗಲೇ ಹಣ, ಜಾತಿ ಮತ್ತಿತರ ಪ್ರಭಾವಕ್ಕೆ ಒಳಗಾಗದೆ ನೇಮಿಸಿದರೆ ಅಧಿಕಾರಿಗಳಿಗೂ ಕಲಿಯುವುದು ಅನಿವಾರ್ಯವಾಗುತ್ತದೆ. ಅದರ ಹೊರತಾಗಿ ದುಡ್ಡು-ಜಾತಿಗಳಿದ್ದರೆ ಹುದ್ದೆಯನ್ನು ‘ಪಡೆದುಕೊಳ್ಳಬಹುದು ಅಥವಾ ಕೊಂಡುಕೊಳ್ಳಬಹುದು’ ಎನ್ನುವ ವಾತಾವರಣ ಇದ್ದರೆ ‘ದುಡ್ಡು ಹಾಕಿ ದುಡ್ಡು ತೆಗೆಯುವ’ ವ್ಯಾಪಾರಿ ಮನೋಭಾವ ಬೆಳೆಯುತ್ತದೆಯೇ ಹೊರತು ‘ಸಾಮರ್ಥ್ಯ’ದ ಮೂಲಕ ‘ಸಾಧಿಸುವ’ ಛಲ ಕಂಡುಬರುವುದಿಲ್ಲ.

ಸದ್ಯ ರಾಜ್ಯದ ಕಾರ್ಯಾಂಗಕ್ಕೆ ಇಂಥ ಪಾರ್ಶ್ವವಾಯು ಬಡಿದಿದೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿ ಕೆಲಸ ಮಾಡದಿರಲು ಇದೂ ಒಂದು ಕಾರಣವಾಗಿದೆ. ಶಾಸಕಾಂಗದ ನಾಯಕರು ಅಂದರೆ ರಾಜಕಾರಣಿಗಳು ಯಾವ ರಾಜಕಾರಣವನ್ನಾದರೂ ಮಾಡಲಿ, ಆದರೆ ಕಾರ್ಯಾಂಗದ ಕಸುವು ಕಮ್ಮಿ ಆಗದಂತೆ ಮಾಡಲಿ. ಒಂದೊಮ್ಮೆ ಕಾರ್ಯಾಂಗವೂ ಶಾಸಕಾಂಗದ ರೀತಿ ಇನ್ನೂ ಕುಸಿದರೆ ಜನ ಅದರ ಪರಿಣಾಮ ಎದುರಿಸಬೇಕಾಗುತ್ತದೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಈ  ವರ್ಷ ನಿವೃತ್ತರಾಗಲಿರುವ IAS, IPS ಅಧಿಕಾರಿಗಳು!

ಈ ವರ್ಷ ನಿವೃತ್ತರಾಗಲಿರುವ IAS, IPS ಅಧಿಕಾರಿಗಳು!

ಈ ವರ್ಷ ಐಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ ಮಾರ್ಚ್ 31 ರಂದು, ಎಸ್.ಆರ್. ಉಮಾಶಂಕರ್ ಏಪ್ರಿಲ್ 30 ರಂದು, ಎನ್. ಜಯರಾಂ ಮೇ 31ರಂದು, ಅತಿಲ್‌ಕುಮಾರ್ ತಿವಾರಿ, ಜಿ. ಸತ್ಯವತಿ, ಅಜಯ್ ಸೇರ್ ಜೂನ್ 30 ರಂದು ಹಾಗೂ ನಿಲಯ ಮಿತಾಶ್ ಡಿಸಂಬರ್ 31 ರಂದು ನಿವೃತ್ತಿಯಾಗಲಿದ್ದಾರೆ.

read more
ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಲಾಬಿ ಶುರು

ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಲಾಬಿ ಶುರು

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ಮಹಾನಗರದ ಪೊಲೀಸ್ ಕಮಿಷನರ್ ಆಗಲು DG & IGP ಹುದ್ದೆಗಿಂತಲೂ ಹೆಚ್ಚು ಪೈಪೋಟಿ ಮತ್ತು ಲಾಭಿ ನಡೆಯುತ್ತದೆ. ಬಿ ದಯಾನಂದ್ ಅವರನ್ನು 2023ರ ಮೇ 31ರಂದು ಹಾಲಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿತ್ತು.

read more
Instagram
Instagram