ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

Dharaneesh Bookanakere |

Mar 12, 2025 | Political Diary

Dharaneesh Bookanakere

Mar 12, 2025 | Political Diary

ಡಿಕೆ ಶಿವಕುಮಾರ್ ಅವರಿಗೆ ಸ್ವಾಮೀಜಿಗಳು ‘ನೀವು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿ ಆಗೇ ಆಗುತ್ತೀರಿ’ ಎಂದಿದ್ದಾರಂತೆ. ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಸ್ವಾಮೀಜಿಗಳು ಹಾಗೆ ಹೇಳಿದ್ದಾರಂತೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಗೊತ್ತಿದ್ದರೂ, ತಮ್ಮ ವಿರುದ್ಧದ ಕಾನೂನು ಹೋರಾಟದ ಕುಣಿಕೆಗಳು ಬಿಗಿಯಾಗಬಹದು ಎಂಬ ಭಯವಿದ್ದರೂ ಡಿಕೆಶಿ ಸಿಎಂ ಆಗುವ ಪ್ರಯತ್ನವನ್ನು ನಿಲ್ಲಿಸಿಲ್ಲವಂತೆ. ಸಿಎಂ ಸ್ಥಾನವನ್ನು ಪಡೆದೇ ತಿರಬೇಕೆಂಬ ಹಠಕ್ಕೆ ಬಿದ್ದರೆ, ಅದೂ ಸಿಗದೆ ಜೊತೆಗೆ ಇರುವ ಕೆಪಿಸಿಸಿ ಕುರ್ಚಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದೆಂದು ಅರಿವಿದ್ದರೂ ಗುರಿಯಿಂದ ಹಿಂದೆ ಸರಿಯುತ್ತಿಲ್ಲವಂತೆ.

ಇವು ಅಂತೆ-ಕಂತೆಗಳು ಎಂದು ಅಲ್ಲಗಳೆಯುವಂಥವಲ್ಲ. ರಾಜಕಾರಣದಲ್ಲಿ ಬಹುತೇಕ ಸುದ್ದಿಗಳು, ಕುತೂಹಲಕಾರಿ ಸಂಗತಿಗಳು ಮೊದಲಿಗೆ ಕಾಣಿಸುವುದೇ ಅಂತೆ-ಕಂತೆಗಳಂತೆ. ದಿನಕಳದಂತೆ ನಿರ್ದಿಷ್ಟ ರೂಪ ಪಡೆದುಕೊಳ್ಳುತ್ತವೆ. ಮತ್ತೆ ವಿಷಯಕ್ಕೆ ಬರುವುದಾದರೆ ಡಿಕೆಶಿ ನಂಬಿರುವುದು ‘ಪ್ರಬಲ ಸ್ವಾಮೀಜಿಗಳ ಮಾತನ್ನು ಮಾತ್ರ’ ಎಂದು ಹೇಳಲಾಗುತ್ತಿದೆ. ಆದರೆ ಪ್ರಬಲ ಎಂದು ನಿರ್ಧರಿಸಲು ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎನ್ನುವುದು ಗೊತ್ತಾಗಿಲ್ಲ.

ಸ್ವಾಮೀಜಿಗಳು ನುಡಿದ ಭವಿಷ್ಯಗಳ ಪೈಕಿ ಎಷ್ಟು ನಿಜವಾಗಿವೆ ಎನ್ನುವ ಆಧಾರದ ಮೇಲೆ ಯಾವ ಸ್ವಾಮೀಜಿ ಪ್ರಬಲ? ಯಾರು ಪುಡಿ ಸ್ವಾಮೀಜಿ ಎಂದು ನಿರ್ಧಾರವಾಗಬಹುದೇನೋ. ಇರಲಿ. ಡಿಕೆಶಿಗೆ ಇನ್ನೂ ಕೆಲ ಪುಡಿ ಅಥವಾ ಸಣ್ಣಪುಟ್ಟ ಸ್ವಾಮೀಜಿಗಳು ಕೂಡ ‘ನೀವು ಸಿಎಂ ಆಗುವುದು ಗ್ಯಾರಂಟಿ’ ಎಂದು ಹೇಳಿದ್ದಾರಂತೆ. ಅವುಗಳನ್ನು ಡಿಕೆಶಿ ನಂಬುತ್ತಿಲ್ಲವಂತೆ. ರಾಜಕಾರಣಿಗಳು ಮಾತ್ರ ಸ್ವಾಮೀಜಿಗಳನ್ನು ನೀವು ಇಂದ್ರ-ಚಂದ್ರ ಎಂದು ಅಟ್ಟಕ್ಕೇರಿಸುವುದಿಲ್ಲ. ಅವಕಾಶ ಸಿಕ್ಕರೆ ಸ್ವಾಮೀಜಿಗಳು ಕೂಡ ರಾಜಕಾರಣಿಗಳನ್ನು ಆಕಾಶದಾಚೆಗೆ ಏರಿಸಿಬಿಡುತ್ತಾರೆ ಎನ್ನುವುದು ಬೇರೆ ಮಾತು.

ಇನ್ನೊಂದು ನಿದರ್ಶನ…
ಕಳೆದ ಲೋಕಸಭಾ ಚುನಾವಣೆ ವೇಳೆ ಕೆಲವರು ದೇವೇಗೌಡರ ಬಳಿ ಹೋಗಿ ‘ಹಾಸನ ಕ್ಷೇತ್ರಕ್ಕೆ ನೀವೇ ಸ್ಪರ್ಧೆ ಮಾಡಿ. ಪ್ರಜ್ವಲ್ ರೇವಣ್ಣಗೆ ಒಳ್ಳೆಯ ಹೆಸರಿಲ್ಲ’ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ದೇವೇಗೌಡರು, ‘ನೀವು ಯಾರಾದರೂ ಪ್ರಜ್ವಲ್ ರೇವಣ್ಣ ಜಾತಕವನ್ನು ನೋಡಿದ್ದೀರಾ? ಅವನಿಗೆ ಯೋಗ ಇದೆ. ಬಹಳ ಎತ್ತರಕ್ಕೆ ಬೆಳಿಯುತ್ತಾನೆ’ ಎಂದಿದ್ದಾರೆ. ಅಷ್ಟಕ್ಕೆ ಮಾತು ನಿಲ್ಲಿಸಿಲ್ಲ; ‘ಪ್ರಜ್ವಲ್ ಹೆಸರು ಕೆಟ್ಟಿದೆ ಎನ್ನುವ ದೂರು ನನಗೂ ಬಂದಿದೆ. ಆದರೆ ಜಾತಕದ ಪ್ರಕಾರ ಆತನಿಗೆ ಒಳ್ಳೆಯ ಅವಕಾಶ ಇದೆ ಎಂದು ಪ್ರಭಾವಿ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಅವರು ಹೇಳಿದ್ದಾರೆ ಎಂದರೆ ಪ್ರಜ್ವಲ್ ಗೆದ್ದೇ ಗೆಲ್ಲುತ್ತಾನೆ. ಗೆದ್ದಮೇಲೆ ಅವನಿಗೆ ಬುದ್ದಿ ಹೇಳೋಣ’ ಎಂದಿದ್ದಾರೆ. ಹೀಗೆ ಜಾತಕದ ಪ್ರಕಾರ ಪ್ರಜ್ವಲ್ ಗೆ ಟಿಕೆಟ್ ಕೊಡಲಾಯಿತು. ಮುಂದೇನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಮತ್ತೊಂದು ಉದಾಹರಣೆ…
ಸತ್ತೇಹೋಗಿದ್ದ ಸೌಜನ್ಯ ಕೊಲೆ ಪ್ರಕರಣ ಇತ್ತೀಚಿಗೆ ಮತ್ತೆ ಚರ್ಚೆಯಾಗುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಧರ್ಮಗಳ ವಿವರಗಳು ಒಂದೊಂದೆ ಹೊರಬರುತ್ತಿವೆ. ಮೈಕ್ರೋ ಫೈನಾನ್ಸ್ ಪ್ರಕರಣದ ಮೂಲಕ ಧರ್ಮಸ್ಥಳದಲ್ಲಿ ನಡೆಯುವ ವಸೂಲಿ ದಂಧೆಯೂ ಬಯಲಾಗುತ್ತಿದೆ. ಧರ್ಮಾಧಿಕಾರಿಯ ಸೊಲ್ಲು ಸೊರಗಿದೆ. ಜೊತೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತಿತರರು ಅಂಗಿ ಬಿಚ್ಚಿಟ್ಟು ಧರ್ಮಸ್ಥಳಕ್ಕೆ ಭೇಟಿಕೊಟ್ಟ ಫೋಟೋಗಳು ವೈರಲ್ ಆಗುತ್ತಿವೆ. ಆ ಸಂದರ್ಭದಲ್ಲಿ ಸಚಿವ ಎಚ್.ಸಿ. ಮಹದೇವಪ್ಪ ಕೂಡ ಧರ್ಮಸ್ಥಳದಲ್ಲಿ ಇದ್ದರು. ಆದರೆ ‘ಅಂಗಿ ಕಳಚಿ ದೇವಸ್ಥಾನ ಪ್ರವೇಶ ಮಾಡಬೇಕು ಎನ್ನುವುದಾದರೆ ನಾನು ಅಲ್ಲಿಗೆ ಹೋಗುವುದಿಲ್ಲ’ ಎಂದು ಅವರು ಹೊಗಲೇ ಇಲ್ಲ.

ಹಿಂದೊಮ್ಮೆ…
ಸಿರಿಗೆರೆ ಸ್ವಾಮೀಜಿಗಳು ಒಮ್ಮೆ ಶಿಕ್ಷಣ ಸಚಿವರಾಗಿದ್ದ ಎಚ್. ವಿಶ್ವನಾಥ್ ಅವರಿಗೆ ‘ತಮ್ಮ ಶಿಕ್ಷಣ ಸಂಸ್ಥೆಯ ಕೆಲಸವೊಂದಕ್ಕೆ ಸಂಬಂಧಿಸಿದ ಕಡತವನ್ನು ತೆಗೆದುಕೊಂಡು ಮಠಕ್ಕೆ ಬನ್ನಿ’ ಎಂದು ‘ಸೂಚಿಸಿ’ದರು. ಇದಕ್ಕೆ ವಿಶ್ವನಾಥ್, ‘ನಾನು ಭಕ್ತನಾಗಿ ಮಠಕ್ಕೆ ಬರುತ್ತೇನೆಯೇ ವಿನಃ ಸಚಿವನಾಗಿ ಕಡತ ತೆಗೆದುಕೊಂಡು ಬರುವುದಿಲ್ಲ’ ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು. ನಂತರ ಸ್ವಾಮೀಜಿಗಳ ಪ್ರಭಾವವೋ ಏನೋ ಶಿಕ್ಷಣ ಖಾತೆಯನ್ನು ವಿಶ್ವನಾಥ್ ಅವರಿಂದ ಕಿತ್ತುಕೊಳ್ಳಲಾಯಿತು.

ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ, ದಾವಣಗೆರೆ ಮತ್ತಿತರ ಜಿಲ್ಲೆಗಳ ಲಿಂಗಾಯತ ಶಿಕ್ಷಣ ಸಂಸ್ಥೆಗಳಿಗೆ ಕೆಲವು ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆ ಮಾಡಿರಲಿಲ್ಲ. ಇದಕ್ಕೆ ಆಕ್ರೋಶಗೊಂಡಿದ್ದ ಸ್ವಾಮೀಜಿಗಳು ಸಭೆ ನಡೆಸಿ ಬಹಿರಂಗವಾಗಿ ಸರ್ವನಾಶವಾಗಲಿ ಎಂದು ಶಾಪಕೊಟ್ಟಿದ್ದರು.

ಇತಿಹಾಸದ ಕಡೆ ನೋಡಿದರೆ ಇನ್ನೂ ಹಲವು ಸಂಗತಿಗಳು ತಿಳಿಯುತ್ತವೆ. ದಿವಂಗತ ಡಿ. ದೇವರಾಜ ಅರಸು ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಿದ್ದರು. ಧರ್ಮಸ್ಥಳದ ಭಕ್ತರಾಗಿದ್ದರು. ಆರಂಭದ ದಿನಗಳಲ್ಲಿ ಅಹಿಂದ ವರ್ಗದ ಪ್ರಜ್ಞಾವಂತ, ಪ್ರಗತಿಪರ ಯುವಕರನ್ನು ಗುರುತಿಸಿ ಅವಕಾಶ ನೀಡಿದ್ದ ಅರಸು ಕಡಕಡೆಗೆ ಜ್ಯೋತಿಷಿಗಳ-ಸ್ವಾಮೀಜಿಗಳ ಮಾತನ್ನು ಕೇಳಿ ನಿರ್ಧಾರ ಮಾಡುತ್ತಿದ್ದರು. ಯಾವಾಗ ಅವರ ನಿರ್ಧಾರವನ್ನು ಅವರು ತೆಗೆದುಕೊಳ್ಳದೆ ಸ್ವಾಮೀಜಿಗಳ ಸುಪರ್ದಿಗೆ ಬಿಟ್ಟರೋ ಆಗಲೇ ಅರಸು ಅವನತಿ ಶುರುವಾಯಿತು ಎನ್ನುವ ಮಾತು ಕೂಡ ಇದೆ.

ದೇವರಾಜ ಅರಸು ಅವರದು ಒಂದು ಉದಾಹರಣೆಯಷ್ಟೇ, ದೇವೇಗೌಡ, ಯಡಿಯೂರಪ್ಪ ಆದಿಯಾಗಿ ಸ್ವಾಮೀಜಿಗಳನ್ನು ನಂಬುವ ರಾಜಕಾರಣಿಗಳ ಪೈಕಿ ಬಹುತೇಕರು ಆರಂಭದ ದಿನಗಳಲ್ಲಿ ಸ್ವಸಾಮರ್ಥ್ಯದಿಂದ ಬೆಳೆದಿದ್ದಾರೆ. ದೇವೇಗೌಡ, ಯಡಿಯೂರಪ್ಪ ಊರೂರು ಸುತ್ತಿ, ಚಂದ ಎತ್ತಿ ಪಕ್ಷ ಕಟ್ಟಿದ್ದಾರೆ. ದೇವೇಗೌಡರಿಗೆ ತಮ್ಮ ಶ್ರಮದ ಮೇಲೆ ವಿಶ್ವಾಸವಿದ್ದುದ್ದರಿಂದಲೇ ಪರ್ಯಾಯ ಮಠ ಕಟ್ಟಿದರು. ಯಡಿಯೂರಪ್ಪ ಉಪ ಮುಖ್ಯಮಂತ್ರಿ ಆಗುವವರೆಗೂ ಯಾವ ಸ್ವಾಮೀಜಿ ಬಳಿಯೂ ಹೋಗಿರಲಿಲ್ಲ. ಹೀಗೆ ಕಷ್ಟ ಪಟ್ಟು ಮೇಲೆ ಬಂದು ಯಾವುದೋ ಒಂದು ಹಂತದಲ್ಲಿ ಜಾತಿ, ಅಧಿಕಾರ ಸೃಷ್ಟಿಸುವ ಅಂಧಕಾರ ಅಥವಾ ಸಿಕ್ಕಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಉಮೇದಿನಿಂದ ಸ್ವಾಮೀಜಿಗಳ ಪಾದಾರವಿಂದಗಳಲ್ಲಿ ಪಾವನರಾಗಿದ್ದಾರೆ.

ಇಡೀ ದೇಶದಲ್ಲಿ ಅತಿ ಹೆಚ್ಚು ಮಠಗಳಿರುವುದು ಅಥವಾ ಸ್ವಾಮೀಜಿಗಳ ಸಾಮ್ರಾಜ್ಯ ಇರುವುದು (ಈ ಬಗ್ಗೆ ಇನ್ನೊಮ್ಮೆ ಬರೆಯುವೆ) ಕರ್ನಾಟಕದಲ್ಲಿ. ಆದರೂ ರಾಜ್ಯದ ಯಾವೊಂದು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದಲ್ಲಿ ಸ್ವಾಮೀಜಿಯೊಬ್ಬರೇ ನಿರ್ಣಾಯಕ ಎನ್ನುವಂತಿಲ್ಲ. ನಾನಾ ಕಾರಣಗಳಿಂದಾಗಿ ಕರ್ನಾಟಕದ ಯಾವ ಸ್ವಾಮೀಜಿಗೂ ಬಹಿರಂಗವಾಗಿ ಇಂಥವರನ್ನೇ ಗೆಲ್ಲಿಸಿ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇಂಥ ಮಿತಿಗಳ ನಡುವೆಯೂ ಅವರು ‘ಪ್ರಭಾವಿ’ ಹೇಗೆ ಎನ್ನುವುದು ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ರಾಜಕಾರಣವೇ ಹಾಗೆ ಸುಲಭಕ್ಕೆ ಅರ್ಥವಾಗುವಂಥದ್ದಲ್ಲ.

Recent Article

Comments

0 Comments

Submit a Comment

Your email address will not be published. Required fields are marked *

Related Article

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿಶ್ವವಿದ್ಯಾಲಯಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಕಾರ್ಯಕ್ರಮಗಳ‌ ಅನುಷ್ಠಾನಕ್ಕೆ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದಂತೆ ಮುಂದುವರೆಸಿದೆ.

read more
ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.

read more
ಡಿಕೆಶಿ ಕಾಂಗ್ರೆಸ್ ಬಿಡಲ್ಲ !

ಡಿಕೆಶಿ ಕಾಂಗ್ರೆಸ್ ಬಿಡಲ್ಲ !

ರಾಜಕಾರಣಿಗಳು ಬೇರೆಯವರ ಭುಜದ ಮೇಲೆ ಬಂದೂಕಿಟ್ಟು ಗೋಲಿ ಚಲಾಯಿಸುವುದು ಜಾಸ್ತಿ. ಎಲ್ಲೋ ಯಾರಿಗೋ ಏನೋ ಸಂದೇಶ ಕೊಡಲು ಬೇರಾರನ್ನೋ ಬಳಸಿ ಬಿಸಾಡುತ್ತಾರೆ. ಡಿಕೆ ಶಿವಕುಮಾರ್-ಜಗ್ಗಿ ವಾಸುದೇವ್ ವಿಷಯದಲ್ಲೂ ಹೀಗೆ ಆಗಿರಬಹುದು. ಇದರ ಹೊರತಾಗಿ ಡಿಕೆಶಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ.

read more
Instagram
Instagram