ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.
ಇವೆಲ್ಲದರ ನಡುವೆ ಇದನ್ನು ‘ಹಲಾಲ್ ಬಜೆಟ್’ ಎಂದು ಬಿಂಬಿಸಲು ಬಿಜೆಪಿ ಭಾರೀ ಪ್ರಮಾಣದ ಬೆವರು ಹರಿಸುತ್ತಿದೆ. ಅಭಿವೃದ್ಧಿ ಎನ್ನುವುದು, ಇನ್ನೂ ಚೆನ್ನಾಗಿ ಮಾಡಬೇಕು ಎನ್ನುವುದು ಇದ್ದೇ ಇರುತ್ತದೆ. ಅದರ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಪೈಕಿ ಯಾರೊಬ್ಬರೂ ಮಾತನಾಡುತ್ತಿಲ್ಲ. ಬಜೆಟ್ ಹುಳುಕುಗಳನ್ನು ಹುಡುಕಿ ತೆಗೆದು ತೋರಿಸುವ ಸಾಮರ್ಥ್ಯ ಅವರಾರಲ್ಲೂ ಕಾಣುತ್ತಿಲ್ಲ. ಬದಲಿಗೆ ವಾಟ್ಸಾಪ್ ಮೂಲಕ ಬಂದ ‘ಹಲಾಲ್ ಬಜೆಟ್’ ಎಂಬ ಮಂತ್ರವನ್ನು ಜಪಿಸುತ್ತಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಷ್ಟಿಕರಣ ಮಾಡುತ್ತಿದೆ ಎಂಬ ಪ್ರಪೋಗಂಡದ ಮೂಲಕವೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ, ಮುಂದುವರೆದ ಭಾಗವಾಗಿ ಸಿದ್ದರಾಮಯ್ಯ ಬಜೆಟ್ ಗೆ ‘ಹಲಾಲ್ ಬಜೆಟ್’ ಎಂಬ ಹಣೆಪಟ್ಟಿ ಹಚ್ಚಲು ಯತ್ನಿಸುತ್ತಿದೆ. ಬಿಜೆಪಿ ಹೀಗೆ ಮಾಡುತ್ತದೆ ಅಂತಾ ಗೊತ್ತಿದ್ದೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರ ಖೆಡ್ಡಾಕ್ಕೆ ಬಿದ್ದಿವೆ. ಸಿದ್ದರಾಮಯ್ಯ ಉತ್ತಮ ಬಜೆಟ್ ರೂಪಿಸುವುದರಲ್ಲಿ ವಿಫಲರಾಗಿದ್ದಾರೆ, ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸಿಕ್ಕಾಪಟ್ಟೆ ಫಂಡು ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಮಾತ್ರ ಇದನ್ನು ‘ಹಲಾಲ್ ಬಜೆಟ್’ ಎಂದು ವ್ಯಾಖಾನಿಸಲಾಗುತ್ತಿಲ್ಲ. ಬದಲಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ Lack of Political Management ಅಥವಾ Lack of Political Diplomacy ಎಂಬ ಕಾರಣಗಳಿಗೆ.
ಮೊದಲನೆಯದಾಗಿ, ಬಜೆಟ್ ಮಂಡನೆಯಾಗುತ್ತಿದ್ದಂತೆ ಬಿಜೆಪಿ ಐಟಿ ಸೆಲ್ ‘ಹಲಾಲ್ ಬಜೆಟ್’ ಎಂಬ ಒಂದು ಪೋಸ್ಟರ್ ಮಾಡಿತು. ಕಾಲಾಳುಗಳು ಶಕ್ತಾನುಸಾರ ಶೇರ್ ಮಾಡಿದರು. ಟಿವಿಗಳಿಗೂ ಅದೇ ಬೇಕಿತ್ತು. ವಿಪಕ್ಷ ನಾಯಕರಿಗೆ ಕ್ಯಾಚಿ ಪದ ಸಿಕ್ಕಿತ್ತು. ಅಲ್ಲಿಗೆ ಉಳಿದೆಲ್ಲಾ ವಿಚಾರಗಳು ಪಕ್ಕಕ್ಕೆ ಸರಿದವು. ಟಿವಿಯವರಿಗೆ ‘ಯಾಕಪ್ಪ ಹೀಗೆ ಮಾಡುತ್ತಿದ್ದೀರಿ? ನಮ್ಮ ವರ್ಷನ್ ಎಲ್ಲಿ?’ ಎಂದು ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಕಚೇರಿಯಿಂದ ಒಂದೇ ಒಂದು ಫೋನು ಹೋಗಿದ್ದರೂ ಇಷ್ಟೊಂದು ಅನಾಹುತವಾಗುತ್ತಿರಲಿಲ್ಲ.
ಇರಲಿ, 2025ರ ಕೇಂದ್ರ ಸರ್ಕಾರದ ಬಜೆಟ್ ಹೇಗಿದೆ ಎನ್ನುವುದನ್ನು ನೋಡೋಣ. ಅಲ್ಪಸಂಖ್ಯಾತರ ಕಲ್ಯಾಣಾಕ್ಕಾಗಿ ಕೇಂದ್ರ ಸರ್ಕಾರ ಹಿಂದಿನ ಹಣಕಾಸು ವರ್ಷದ ಬಜೆಟ್ ಅಂದಾಜಿಗಿಂತ ಸುಮಾರು 166 ಕೋಟಿ ರೂಪಾಯಿಗಳನ್ನು ಹೆಚ್ಚಾಗಿ ಕೊಟ್ಟಿದೆ. ಪರಿಷ್ಕೃತ ಅಂದಾಜಿಗಿಂತ 1,481 ಕೋಟಿ ರೂಪಾಯಿಗಳ ಹೆಚ್ಚಿನ ಅನುದಾನ ಸಿಕ್ಕಿದೆ. ಒಟ್ಟಾರೆಯಾಗಿ ಕಳೆದ ಬಾರಿಗಿಂತ ಶೇಕಡಾ 5ರಷ್ಟು ಹೆಚ್ಚು ಹಣ ಅಂದರೆ 3,350 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಈಗ ಹೇಳಿ ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವುದು ಕೂಡ ಹಲಾಲ್ ಬಜೆಟ್ ಅನ್ನೇ ಅಲ್ಲವೇ?
ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ನೇಮಿಸಿದ್ದ ದೆಹಲಿ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಏಳು ಜನರ ಸಮಿತಿ ಕೊಟ್ಟಿರುವ ವರದಿಯಲ್ಲಿ ‘ಮುಸ್ಲಿಮರ ಸ್ಥಿತಿ ದಲಿತರಿಗಿಂತಲೂ ಕೆಟ್ಟದ್ದಾಗಿದೆ’ ಎಂದು ಹೇಳಿದೆ. ಇದೇ ಆಧರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಣ ಕೊಡಬೇಕಾದರೆ ರಾಜ್ಯ ಬಜೆಟಿನ ಶೇಕಡಾ 12.92ರಷ್ಟು ಹಣ ಕೊಡಬೇಕು. ಏಕೆಂದರೆ 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿರುವ ಮುಸ್ಲಿಂ ಪ್ರಮಾಣ 12.92ರಷ್ಟು. ಈ ರೀತಿ ಏಕೆಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅವರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ಟಿನ ಶೇಕಡಾ 24ರಷ್ಟು ಹಣ ನೀಡಲಾಗಿದೆ. ಅವರಿಗೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಕೊಡಲಾಗಿದೆ ಎನ್ನುವುದಾದರೆ ಅವರಿಗಿಂತಲೂ ಕೆಟ್ಟ ಸ್ಥಿತಿಯಲ್ಲಿರುವ ಮುಸ್ಲಿಮರಿಗೆ 12.92ರಷ್ಟು ಹಣ ಕೊಡಬಾರದೇ?
0 Comments